Saturday, November 15, 2025

ಹಳೆಯ ವೈಷಮ್ಯಕ್ಕೆ ಸುಪಾರಿ: ಹಲ್ಲೆಗೊಳಗಾಗಿದ್ದ ಎಸ್‌ಡಿಎ ಅಧಿಕಾರಿ ಸಾವು; ನಾಲ್ವರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಸಮಾಜ ಕಲ್ಯಾಣ ಇಲಾಖೆಯ ಎಸ್‌ಡಿಎ ಅಧಿಕಾರಿ ಅಂಜಲಿ ಕಂಬಾನೂರ್ (35) ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕಾನೂನು ಸೇವೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಈ ಯುವ ಅಧಿಕಾರಿ ದುಷ್ಕೃತ್ಯಕ್ಕೆ ಬಲಿಯಾದ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.

ನವೆಂಬರ್ 12 ರಂದು ಗ್ರೀನ್ ಸಿಟಿ ಬಡಾವಣೆಯ ಬಳಿಯಲ್ಲಿ ಸುಪಾರಿ ಕಿಲ್ಲರ್ಸ್‌ಗಳು ಕಾರಿನಲ್ಲಿ ಬಂದು ಅಂಜಲಿ ಅವರ ಮೇಲೆ ಕೊಡಲಿ ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಈ ದಾರುಣ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ನಾಲ್ವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ತಾಪುರ ತಾಲೂಕಿನ ಯಲ್ಲಪ್ಪ, ಕಾಶಿನಾಥ್, ದತ್ತಾತ್ರೇಯ ಹಾಗೂ ಜಗದೀಶ್ ಬಂಧಿತರು.

ತನಿಖೆಯಲ್ಲಿ ಬಯಲಾಗಿರುವಂತೆ, ಕಲಬುರಗಿ ಜಿಲ್ಲೆಯ ಶಹಾಬಾದ್ ಮೂಲದ ಶಂಕರ್ ಹಾಗೂ ವಿಜಯ್ ಎಂಬವರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಂಜಲಿ ಅವರನ್ನು ಕೊಲ್ಲಲು ಸುಪಾರಿ ನೀಡಿದ್ದರೆನ್ನಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಶಂಕರ್ ಮೇಲೆ ನಡೆದ ಹಲ್ಲೆಗೆ ಅಂಜಲಿ ಕಾರಣ ಎನ್ನುವ ತಪ್ಪು ಧೋರಣೆಯಿಂದ ಪ್ರತೀಕಾರ ಯತ್ನ ನಡೆದಿದೆ. ಹಲ್ಲೆ ಬಳಿಕ ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ನಾಲ್ವರನ್ನು ವಿಜಯಪುರದ ಬಳಿ ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ಶಂಕರ್ ಹಾಗೂ ವಿಜಯ್ ಗಾಗಿ ಶೋಧ ಮುಂದುವರಿದಿದೆ.

error: Content is protected !!