ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ: ಸುರಿವ ಮಳೆ ನಡುವೆ ಪಂಜಿನ ಮೆರವಣಿಗೆ!

ಹೊಸಗಂತ ಡಿಜಿಟಲ್‌ ಡೆಸ್ಕ್ ಮಡಿಕೇರಿ:
ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಸುರಿಯುವ ಮಳೆಯ ನಡುವೆಯೂ ಶನಿವಾರ ರಾತ್ರಿ ಮಾದಾಪುರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಸ್ವಾರ್ಥ ರಾಜಕೀಯಕ್ಕಾಗಿ ಮತೀಯ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ ಕಹಿ ಘಟನೆಯನ್ನು ಇಂದಿನ ಸಮಾಜಕ್ಕೆ ತಿಳಿಸುವ ಮತ್ತು ಕಳೆದು ಹೋಗಿರುವ ಭಾರತ ಭೂಭಾಗಗಳನ್ನು ಮತ್ತೆ ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆನ್ನುವ ಗುರಿಯೊಂದಿಗೆ ಹಿಂದೂ ಜಾಗರಣ ವೇದಿಕೆಯ ವತಿಯಿಂದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾದಾಪುರದ ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಪಂಜಿನ ಮೆರವಣಿಗೆ ಮಾದಾಪುರದ ಮುಖ್ಯ ಬೀದಿಗಳಲ್ಲಿ ಸಾಗಿ ಮಾದಾಪುರ ಶ್ರಿ ಗಣಪತಿ ದೇವಾಲಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ ಹರೀಶ್ ಶಕ್ತಿನಗರ ಅವರು ಮಾತನಾಡಿ, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಅಂದಿನ ಕೆಲವರ ಸ್ವಾರ್ಥದಿಂದಾಗಿ ದೇಶ ವಿಭಜನೆ ಮಾಡುವ ಮೂಲಕ ಅಪಮೌಲ್ಯಗೊಳಿಸಲಾಯಿತು. ನೂರಾರು ವರ್ಷಗಳ ಕಾಲ ಅಂದು ನಡೆದ ಸ್ವಾತಂತ್ರ್ಯ ಹೋರಾಟ ಈಗಿನ ನಮ್ಮ ನಕ್ಷೆಯಲ್ಲಿನ ಭಾರತಕ್ಕಾಗಿ ಆಗಿರಲಿಲ್ಲ. ಪಾಕಿಸ್ಥಾನ, ಬಾಂಗ್ಲಾದೇಶಗಳನ್ನೊಳಗೊಂಡ ಭೂಪ್ರದೇಶವೂ ಭಾರತದ ಭೂಭಾಗಗಳೇ ಆಗಿದ್ದವು. ಅಂದಿನ ಮಹಮ್ಮದಾಲಿ ಜಿನ್ನಾ, ನೆಹರು ಸೇರಿದಂತೆ ಕೆಲವರ ತಪ್ಪು ನಿರ್ಧಾರಗಳು ದೇಶವನ್ನೇ ಮತೀಯ ಆಧಾರದಲ್ಲಿ ಚೂರು ಚೂರು ಮಾಡಿತು. ಅಂದು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದವರು ಇಂದು ತಮ್ಮ ಹೊಟ್ಟೆಪಾಡಿನ ರಾಜಕೀಯಕ್ಕಾಗಿ ಜಾತ್ಯತೀತತೆಯ ಮಂತ್ರ ಜಪಿಸುತ್ತಾ ನಾವೆಲ್ಲರೂ ಒಂದೇ ಅನ್ನುತ್ತಿರುವುದು ಸ್ವತಂತ್ರ ಭಾರತದ ದುರಂತವೇ ಆಗಿದೆ ಎಂದು ಟೀಕಿಸಿದರು.
ಯುವ ಸಮೂಹ ಸಿದ್ಧವಾಗಿರಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಯೋಧ, ಹವಾಲ್ದಾರ್ ತಂಬುಕುತ್ತಿರ ಗಪ್ಪು ಸೋಮಯ್ಯ ಅವರು ಮಾತನಾಡಿ, ಈ ದೇಶದ ಗಡಿಗಳನ್ನು ಹಗಲಿರುಳು ಸೈನಿಕರು ಕಾಯುತ್ತಿದ್ದು ಇದರಿಂದಾಗಿ ನಮ್ಮ ಸುತ್ತಲಿನ ಶತ್ರುದೇಶಗಳ ಉಪಟಳಗಳನ್ನು ದಿಟ್ಟವಾಗಿ ಎದುರಿಸಿ ದೇಶದೊಳಗೆ ಸುರಕ್ಷಿತವಾಗಿದ್ದೇವೆ. ಅದೇ ರೀತಿ ದೇಶದೊಳಗಿನ ಮತಾಂಧರ ಭಯೋತ್ಪಾದನೆ – ಸಂಘರ್ಷಗಳನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸದಾ ಸಿದ್ಧರಾಗಿ ಇರಬೇಕೆಂದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿಯ ಪ್ರಮುಖರಾದ ರಾಜೀವ್, ತಾಲೂಕು ಸಂಯೋಜಕ ವಿನು ವೇದಿಕೆಯಲ್ಲಿದ್ದರು. ಆರ್.ಎಸ್.ಎಸ್. ಜಿಲ್ಲಾ ಕಾರ್ಯವಾಹ ದೇವಪಂಡ ಡಾಲಿ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹ ಸಂಯೋಜಕ ಚೇತನ್ ಮತ್ತಿತರ ಪ್ರಮುಖರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!