ದೆವ್ವ ಹಿಡಿದಿದೆ ಎಂದು ಹೆದರಿ ಪುಟ್ಟ ಮಗಳನ್ನು ಹೊಡೆದುಕೊಂದ ಪೋಷಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಐದು ವರ್ಷದ ಬಾಲಕಿಗೆ ದೆವ್ವ ಹಿಡಿದುಕೊಂಡಿದೆಯೆಂಬ ಮೂಡ ನಂಬಿಕೆಯಿಂದ ಪೋಷಕರು ಮಾಟ ಮಂತ್ರ ನಡೆಸಿ ಆಕೆಯನ್ನು ಹೊಡೆದು ಕೊಂದ ದುರಂತ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಶುಕ್ರವಾರ- ಶನಿವಾರದ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಮಗುವಿನ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಅವರನ್ನು ಬಂಧಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಮತ್ತು 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‌ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದ.
ಅಂದಿನಿಂದ ಆತ ತನ್ನ ಕಿರಿಯ ಮಗಳ ವರ್ತನೆಯಲ್ಲಿ ಬದಲಾವಣೆಗಳನ್ನು ಅನುಮಾನಿಸಿದ್ದಾನೆ. ಅವಳು ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ಅವನು ನಂಬಿದ್ದಾನೆ. ಮತ್ತು ಅವರನ್ನು ಓಡಿಸಲು ‘ಬ್ಲಾಕ್ ಮ್ಯಾಜಿಕ್’ ಮಾಡಲು ನಿರ್ಧರಿಸಿದ್ದ. ಹುಡುಗಿಯ ತಂದೆ- ತಾಯಿ ಮತ್ತು ಚಿಕ್ಕಮ್ಮ ರಾತ್ರಿಯಲ್ಲಿ ದೆವ್ವ ಓಡಿಸುವ ಆಚರಣೆಯನ್ನು ಮಾಡಿದ್ದಾರೆ ಮತ್ತು ಅದರ ವೀಡಿಯೊವನ್ನು ಸಹ ಚಿತ್ರೀಕರಿಸಿದ್ದಾರೆ. ಈ ವಿಚಾರ ಪೊಲೀಸರು ಅವರ ಫೋನ್‌ ಅನ್ನು ವಶಪಡಿಸಿಕೊಂಡಾಗ ಬೆಳಕಿಗೆ ಬಂದಿದೆ.
ಈ ವಿಡಿಯೋ ಕ್ಲಿಪ್‌ನಲ್ಲಿ, ಆರೋಪಿಗಳು ಅಳುತ್ತಿದ್ದ ಹುಡುಗಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಉತ್ತರಿಸದಿದ್ದಾಗ, ಆ ಮೂವರು ಸೇರಿ ಮಗುವಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ಆ ನಂತರ ಅವಳು ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದಿದ್ದಾಳೆ.
ಆ ಬಳಿಕ ಆರೋಪಿಗಳು ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ನಂತರ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗೆ ಅವರ ವರ್ತನೆ ಅನುಮಾನಾಸ್ಪದವಾಗಿ ಕಂಡಿದ್ದರಿಂದ ಅವರ ಕಾರಿನ ಚಿತ್ರವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ.
ಆಸ್ಪತ್ರೆಯ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಛಾಯಾಚಿತ್ರದಲ್ಲಿರುವ ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಮನೆಗೆ ತಲುಪಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯನ್ವಯ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!