ಹೊಸದಿಗಂತ ವರದಿ ಹುಬ್ಬಳ್ಳಿ:
ಯುವ ಪತ್ರಕರ್ತರು ಹಿರಿಯ ಮಾರ್ಗದರ್ಶನ ಪಡೆಯುವುದು ಅವಶ್ಯಕತೆಯಿದೆ. ಇತ್ತೀಚೆಗೆ ಮಾಧ್ಯಮಗಳು ಬದಲಾಗುತ್ತಿವೆ. ಬಲಾವಣೆ ಜಗದ ನಿಯಮ. ಅದರ ಜೊತೆ ಸತ್ಯ ಹಾಗೂ ನೈಜ ಸುದ್ದಿಗಳಿಗೆ ಮಾನ್ಯತೆ ಕೊಡಬೇಕು ಎಂದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ವಿದ್ಯಾನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಪತ್ರಿಕಾರಂಗ ನಾಲ್ಕನೇ ಅಂಗವಾಗಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಡುತ್ತದೆ. ಪತ್ರಿಕೆಯಲ್ಲಿ ಪ್ರಕಟವಾದ ಉತ್ತಮ ಬರಹಗಳು ಸದನದಲ್ಲಿ ದಾಖಲಾಗಿವೆ. ಈ ಹಿಂದೆ ಒಳ್ಳೆಯ ಕಾರ್ಯ ಮಾಡುವ ರಾಜಕಾರಣಿಗಳಿಗೆ ಪತ್ರಕರ್ತರು ಬೆನ್ನುತಟ್ಟುವ ಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತವಾಗಿ ಪ್ರೋತ್ಸಾಹಿಸುವರು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು ಮಾತನಾಡಿ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆ ಎರಡನೇ ಸ್ಥಾನದಲ್ಲಿ ಕಾಣುತ್ತಿದ್ದಾರೆ. ಮಹಿಳಾ ಪತ್ರಕರ್ತರು ಹೆಚ್ಚಾಗಿ ಮಾಧ್ಯಮ ಲೋಕಕ್ಕೆ ಬರಬೇಕು. ಸರ್ಕಾರದ ಮಾಡುವ ತಪ್ಪುಗಳನ್ನು ವಿರೋಧ ಪಕ್ಷವಾಗಿ ತಿದ್ದುವ ಕಾರ್ಯ ಮಾಧ್ಯಮ ಮಾಡಬೇಕು. ಈಗ ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಸಿಕ್ಕಿದ್ದು, ಬಹುತ್ವದ ದನಿ ಹತ್ತಿಕ್ಕುವ ಕೆಲಸ ವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮ ಆಳುವರ ಹಿತಕಾಯುವ ರಕ್ಷಕ ಅಲ್ಲ. ಆಳಿಸಿಕೊಳ್ಳುವರ ಹಿತಕಾಯಬೇಕು. ಆದರೆ ಸಮಾಕಾಲಿನ ಮಾಧ್ಯಮಗಳು ಅಣಕಿಸುವಂತಾಗಿವೆ. ಪತ್ರಿಕೆಗಳಲ್ಲಿ ವಸ್ತು ನಿಷ್ಠ ವರದಿಗಳು, ಉತ್ತಮ ಸಂಪಾದಕಿಯ, ಜನರ ದನಿಯಾಗಿರುವ ಜನ ಪತ್ರ ಎಲ್ಲಲೂ ಕಾಣಸಿಗುತ್ತಿಲ್ಲ. ವರದಿಗಳು ಮಾಲಿನ್ಯವಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ಗಣಪತಿ ಗಂಗೊಳಿ ಮಾತನಾಡಿದರು. ಪಾಲಿಕೆ ಆಯುಕ್ತ ಈರೇಶ ಅಂಚಟಗೇರಿ, ಪತ್ರಕರ್ತ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಕರ್ನಾಟಕ ಕಾರ್ಯನಿರತ ಸಂಘದ ಪುಂಡಲೀಕ ಬಾಳೋಜಿ, ಹಿರಿಯ ಪತ್ರಕರ್ತ ಆರ್.ಪಿ. ಜಗದೀಶ ಹಾಗೂ ಎಲ್ಲ ಪತ್ರಿಕೆಗಳ ಸ್ಥಾನಿಕ ಸಂಪಾದಕರಿದ್ದರು.
ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ ಪ್ರಜಾವಾಣಿಯ ವರದಿಗಾರ ಎಸ್. ಎಸ್.ಗೋವರ್ಧನ, ವಿಜವಾಣಿಯ ವರದಿಗಾರ ಬಸವರಾಜ ಇದ್ಲಿ, ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಇಬ್ಬರಿಗೆ ಹಂಚಿಕೆ) ಉದವಾಣಿ ನವಲಗುಂದ ವರದಿಗಾರ ಪುಂಡಲೀಕ ಮುಧೋಳ, ವಿಜಯ ಕರ್ನಾಟಕದ ಉಪ್ಪಿನಬೆಟಗೇರಿ ವರದಿಗಾರ ಪ್ರಕಾಶ ಹೂಗಾರ ಲಭಿಸಿದೆ. ಅತ್ಯುತ್ತಮ ಲೇಖನ ಪ್ರಶಸ್ತಿ ಸಂಯುಕ್ತ ಕರ್ನಾಟಕದ ವಿನಾಯಕ ದೇಶಪಾಂಡೆ, ಉದಯವಾಣಿ ವಿನಾಯಕ ನಾಯಕ, ಅತ್ಯುತ್ತಮ ಆಂಗ್ಲ ಭಾಷಾ ವರದಿ ಪ್ರಶಸ್ತಿ ಡೆಕ್ಕನ್ ಹೆರಾಲ್ಡ್ ಶಾಹೀನ ಮೊಕಾಶಿ, ಛಾಯಾಗ್ರಾಹಣ ಪ್ರಶಸ್ತಿ ವಿಜಯವಾಣಿ ಗುರು ಭಾಂಡಗೆ, ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿ ಸಂಯುಕ್ತ ಕರ್ನಾಟಕ ಎ. ಆರ್.ಆನಂದ, ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ ಟಿವಿ ೯ ದತ್ತಾತ್ರೇಯ ಪಾಟೀಲ (ವರದಿಗಾರರು), ಶಿವಾಜಿ ಲಾತೂರಕರ (ಕ್ಯಾಮರಾಮನ್), ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ ಟಿವಿ ೫ ಯಲ್ಲಪ್ಪ ಸೋಲಾರಗೊಪ್ಪ(ವರದಿಗಾರರು), ಪಿ ಶೇಖರ (ಕ್ಯಾಮರಾಮನ್), ಉದಯೋನ್ಮುಖ ಪತ್ರಕರ್ತ ಪ್ರಶಸ್ತಿ ಮಹಾಂತ ಕಾಲೇಜು ವಿದ್ಯಾರ್ಥಿ ಬಸವರಾಜ ವಗರನಾಳಗೆ ಲಭಿಸಿದೆ.