Sunday, November 16, 2025

ಸ್ಪೋಟಕ್ಕೂ ಮೊದಲು ದುಬೈಗೆ ಪರಾರಿಯಾಗಲು ಪ್ಲಾನ್ ಮಾಡಿದ್ದ ವೈದ್ಯೆ ಡಾ. ಶಾಹೀನ್ ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ತನಿಖೆ ಚುರುಕುಪಡೆದುಗೊಂಡಿದ್ದು, ಇತ್ತ ಫರಿದಾಬಾದ್‌ನಲ್ಲಿ 3000 ಕೆಜಿ ಸ್ಫೋಟಕ ಸಂಗ್ರಹ ಪ್ರಕರಣದಲ್ಲಿ ಆರೋಪಿಯಾಗಿರುವ ವೈದ್ಯೆ ಡಾ ಶಾಹೀನಾ ಸೈಯದ್ ಘಟನೆ ನಡೆಯುವ ಕೆಲ ದಿನಗಳ ಹಿಂದಷ್ಟೇ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯೆ ಡಾ. ಶಾಹೀನ್ ಶಾಹಿದ್ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ತಮ್ಮ ಈ ವಿಧ್ವಂಸಕ ಕೃತ್ಯಗಳಿಗೆ ತಮ್ಮ ಸಹಚರರು ಅಂತಿಮ ರೂಪ ನೀಡುವವರೆಗೆ ದುಬೈಗೆ ಪಲಾಯನ ಮಾಡಲು ಪ್ಲಾನ್ ಮಾಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಸಹರಾನ್‌ಪುರ ಮತ್ತು ಫರಿದಾಬಾದ್‌ನಲ್ಲಿ ವೈದ್ಯ ಹುದ್ದೆಯ ಸೋಗಿನಲ್ಲಿದ್ದ ಶಂಕಿತರ ಬಂಧನದ ನಂತರ ಈ ವೈಟ್ ಕಾಲರ್ ಭಯೋತ್ಪಾದಕ ಘಟಕದ ಒಂದೊಂದೇ ಮುಖವಾಡ ಕಳಚಿ ಬಿದ್ದಿತ್ತು. ಹೀಗಾಗಿ ಆಕೆ ದುಬೈಗೆ ಹಾರುವ ಮೊದಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಅಕ್ಟೋಬರ್ 30 ರಂದು ಶಾಹೀನಾಳ ಸಹೋದ್ಯೋಗಿ ಡಾ. ಮುಜಮ್ಮಿಲ್ ಅಹ್ಮದ್ ಗನೈನನ್ನು ಬಂಧಿಸಿದ ನಂತರ, ಆತ ಶಾಹೀನಾಳ ಸ್ವಿಫ್ಟ್ ಡಿಜೈರ್ ಕಾರನ್ನು ಬಳಸುತ್ತಿರುವುದು ಕಂಡುಬಂದಿತು. ಆ ಕಾರಿನಿಂದ ಒಂದು ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಪೊಲೀಸ್ ಮೂಲಗಳು ತಿಳಿಸುವಂತೆ ಇದೆಲ್ಲಾ ಆಗುವುದಕ್ಕೂ ಮೊದಲೇ ಶಾಹೀನಾ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು. ಪಾಸ್‌ಪೋರ್ಟ್ ಪ್ರಕ್ರಿಯೆಯ ಭಾಗವಾಗಿ ನವೆಂಬರ್ 3 ರಂದು ಫರಿದಾಬಾದ್‌ನ ಒಬ್ಬ ಪೊಲೀಸ್ ಅಧಿಕಾರಿ ಅಲ್-ಫಲಾಹ್ ಕ್ಯಾಂಪಸ್‌ನಲ್ಲಿಆಕೆಯನ್ನ ಭೇಟಿ ಮಾಡಿ ಛಾಯಾಚಿತ್ರವನ್ನು ತೆಗೆದುಕೊಂಡಿದ್ದರು. ಆದರೆ ವಿಚಿತ್ರ ಎಂದರೆ ಇದೇ ಸಮಯದಲ್ಲಿ ಭದ್ರತಾ ಸಂಸ್ಥೆಯ ಅಧಿಕಾರಿಗಳು ಆಕೆಯ ಪತ್ತೆಗೆ ಬಲೆ ಬೀಸಿದ್ದರು. ಅಂತಿಮವಾಗಿ ನವೆಂಬರ್ 11 ರಂದು ಲಕ್ನೋದಲ್ಲಿ ಆಕೆಯನ್ನು ಬಂಧಿಸಲಾಯಿತು.

error: Content is protected !!