ಹೊಸದಿಗಂತ ವರದಿ, ವಿಜಯಪುರ:
ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಹನಿಟ್ರ್ಯಾಪ್ ನಡೆಸಿ, ಬ್ಯಾಂಕ್ ನೌಕರನಿಗೆ 10 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ನಡೆಸಿದ ತಾಯಿ, ಮಗ ಹಾಗೂ ಯೂಟ್ಯೂಬರ್ ಸೇರಿ 4 ಜನ ಆರೋಪಿಗಳ ವಿರುದ್ಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಡಿವೈಎಸ್ಪಿ ಕಚೇರಿ ಪಕ್ಕದ ಫೂಟ್ಪಾತ್ನಲ್ಲಿ ಎಳ ನೀರು ಮಾರುತ್ತಿದ್ದ ಮಹಿಳೆ ಸುವರ್ಣ ರಾಹುಲ್ ಹೊನಸೂರೆ, ಮಹಿಳೆಯ ಮಗ ಅಮುಲ್ ರಾಹುಲ್ ಹೊನಸೂರೆ, ಹಂಜಗಿ ಗ್ರಾಮದ ಮಹೇಶ ಮಲ್ಲಪ್ಪ ಬಗಲಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡ, ವೃತ್ತಿಯಲ್ಲಿ ಹೋಮ್ಗಾರ್ಡ್ ಆಗಿರುವ ತೌಶಿಫ್ ಖರೋಶಿ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಸುವರ್ಣ ರಾಹುಲ್ ಹೊನಸೂರೆ ಎಂಬ ಮಹಿಳೆ ಹಾಗೂ ಈಕೆಯ ಮಗ ಅಮುಲ್ ರಾಹುಲ್ ಹೊನ್ನಸೂರೆ ಈ ಇಬ್ಬರು ಕುತಂತ್ರದಿಂದ, ತಮ್ಮ ಕಡೆ ಎಳನೀರು ಕುಡಿಯಲು ಬರುವ ಗಿರಾಕಿಗಳಿಗೆ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ನೀಡಿ, ಮಹಿಳೆ ಸುವರ್ಣ ತಾನಿರುವ ಸ್ಥಳಕ್ಕೆ ಕರೆಸಿ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ತಿಳಿದು ಬಂದಿದೆ.
ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು, ಮರ್ಯಾದೆಗೆ ಹೆದರಿ ಸಾಕಷ್ಟು ಜನರು ಪೊಲೀಸ್ ಠಾಣೆಗೆ ಹೋಗದೆ ದುಡ್ಡು ಕೊಟ್ಟು ಸುಮ್ಮನಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಇಂತಹ ಹನಿಟ್ರ್ಯಾಪ್ ಮಾಡುವವರ ಹೆಡೆಮುರಿ ಕಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

