ಹೊಸದಿಗಂತ ವರದಿ, ಕಟೀಲು
ಕರಾವಳಿಯಲ್ಲಿ ದೇವರೆಡೆಗೆ ಭಯ ಭಕ್ತಿಯನ್ನು ಆಧ್ಯಾತ್ಮದ ಸೆಳೆತವನ್ನು ಯಕ್ಷಗಾನ ಮೂಡಿಸಿದೆ. ಪರಿಣಾಮ ಇಲ್ಲಿ ನೆಮ್ಮದಿಯ ಸಮಾಜವನ್ನು ಸಾಂಸ್ಕೃತಿಕ ಪುನರುತ್ಥಾನದ ಮೂಲಕ ಕಟ್ಟಲು ಯಕ್ಷಗಾನದ ಕೊಡುಗೆ ದೊಡ್ಡದಿದೆ. ಕಟೀಲಿನ ಏಳು ಮೇಳಗಳು, ಇಷ್ಟು ದೊಡ್ಡ ಸಂಖ್ಯೆಯ ಕಲಾವಿದರು, ಸೇವೆಯಾಟ ಆಡಿಸುವ ಭಕ್ತರ ಭಯ ಭಕ್ತಿ ಇವೆಲ್ಲದರ ಅಗಾಧತೆಯನ್ನು ಕೇಳಿದ್ದೇನೆ. ಓದಿ ತಿಳಿದಿದ್ದೇನೆ. ಹಾಗಾಗಿಯೇ ಮತ್ತೆ ಕಟೀಲು ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಬಜಪೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಕಟೀಲು ಏಳೂ ಯಕ್ಷಗಾನ ಮೇಳಗಳ ದೇವರು ಹಾಗೂ ಪರಿಕರಗಳ ಅದ್ದೂರಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಶಾಸಕ ಉಮಾನಾಥ ಕೋಟ್ಯಾನ್, ಭೋಜೇಗೌಡ, ಮಾಜಿ ಸಾಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ್ ಭಟ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯಕ್ಷಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಘವೇಂದ್ರ ಆಚಾರ್, ಕಟೀಲು ದೇಗುಲದ ಅರ್ಚಕರಾದ ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಮಿಥುನ್ ರೈ, ಮತ್ತಿತರರು ಉಪಸ್ಥಿತರಿದ್ದರು.
ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ, ನಿತೇಶ್ ಎಕ್ಕಾರು ನಿರೂಪಿಸಿದರು.

