ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಸೀಸನ್‌ಗೂ ಮುನ್ನ ಕ್ರಿಕೆಟ್ ಲೋಕ ತಲೆಕೆಳಗಾಗುವಷ್ಟು ದೊಡ್ಡ ಟ್ರೇಡ್ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾವನ್ನು ರಾಜಸ್ಥಾನ ರಾಯಲ್ಸ್‌ಗೆ ಕಳುಹಿಸಿ, ಅವರ ಬದಲಿಗೆ ಸ್ಟಾರ್ ವಿಕೆಟ್‌ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಐದು ಬಾರಿ ಪ್ರಶಸ್ತಿ ಜಯಿಸಿದ ಸಿಎಸ್‌ಕೆ ಇಂಥ ಬದಲಾವಣೆ ಮಾಡುವುದರಿಂದ ತಂಡದ ನಾಯಕತ್ವದ ಭವಿಷ್ಯ ಏನೆಂಬ ಕುತೂಹಲ ಹೆಚ್ಚಾಗಿತ್ತು.
ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಈಗಾಗಲೇ ತಂಡದ ಭವಿಷ್ಯದ ನಾಯಕನಾಗಿ ಘೋಷಿಸಲ್ಪಟ್ಟಿದ್ದರೂ, ಕಳೆದ ಸೀಸನ್‌ನಲ್ಲಿ ಗಾಯದ ಕಾರಣದಿಂದ ಹೊರಗುಳಿದಿದ್ದರು. ಆ ಬಳಿಕ ಪುನಃ ಎಂಎಸ್ ಧೋನಿ ಜವಾಬ್ದಾರಿಯನ್ನು ಹೊತ್ತು ತಂಡವನ್ನು ಮುನ್ನಡೆಸಿದ್ದರು. ಈಗ ಸಂಜು ಸ್ಯಾಮ್ಸನ್ ತಂಡಕ್ಕೆ ಸೇರಿಕೊಂಡ ಹಿನ್ನೆಲೆಯಲ್ಲಿ ಅವರ ನಾಯಕತ್ವ ಸಾಧ್ಯತೆಯೂ ಕೇಳಿಬಂದಿತ್ತು. ಆದರೆ, ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದು, ಸಿಎಸ್‌ಕೆ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ರುತುರಾಜ್ ಗಾಯಕ್ವಾಡ್ ಅವರನ್ನು ಮತ್ತೆ 2026 ನೇ ಸೀಸನ್‌ನ ನಾಯಕನಾಗಿ ಘೋಷಿಸಿದೆ.
ಸಿಎಸ್‌ಕೆ ತಂಡವು ರುತುರಾಜ್, ಧೋನಿ, ಶಿವಂ ದುಬೆ, ನೂರ್ ಅಹ್ಮದ್ ಸೇರಿದಂತೆ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಮತೀಶ ಪತಿರಾಣ ಮತ್ತು ರಚಿನ್ ರವೀಂದ್ರ ಸೇರಿದಂತೆ ಹಲವಾರು ಆಟಗಾರರನ್ನು ಬಿಡುಗಡೆ ಮಾಡಲಾಗಿದೆ. ಮಿನಿ ಹರಾಜು ಮುನ್ನ ಚೆನ್ನೈ ತಂಡದ ಬಳಿ 43.4 ಕೋಟಿ ರೂಪಾಯಿ ಬಾಕಿ ಮೊತ್ತವಿದ್ದು, ಒಟ್ಟು 9 ಸ್ಥಾನಗಳು ಇನ್ನೂ ಖಾಲಿಯಾಗಿದೆ. ಇಂತಹ ಹಂತದಲ್ಲೇ ಸಿಎಸ್‌ಕೆ ಮಾಡಿದ ಬೃಹತ್ ಬದಲಾವಣೆ, ಮುಂಬರುವ ಹರಾಜಿನಲ್ಲಿ ತಂಡದಿಂದ ಇನ್ನೂ ಏನಾದರೂ ಸರ್ಪ್ರೈಸ್ ನಿರೀಕ್ಷಿಸಬಹುದೆಂಬ ಸೂಚನೆಯನ್ನು ನೀಡುತ್ತಿದೆ.

