Monday, November 17, 2025

IPL 2026 ಮಿನಿ ಹರಾಜು ಯಾವಾಗಿಂದ? ಎಲ್ಲಿ? ಆರಂಭ: ಇಲ್ಲಿದೆ ಫುಲ್ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್–19 ಮಿನಿ ಹರಾಜಿನ ದಿನಾಂಕ ಅಧಿಕೃತವಾಗಿ ಘೋಷಿತವಾಗಿದ್ದು, ಡಿಸೆಂಬರ್ 16ರಂದು ಅಬುಧಾಬಿ ಈ ವರ್ಷದ ಕ್ರಿಕೆಟ್ ಆಕ್ಷನ್‌ಗಾಗಿ ಪ್ರಮುಖ ವೇದಿಕೆಯಾಗಲಿದೆ. ಕಳೆದ ಬಾರಿ ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಮೆಗಾ ಹರಾಜು ಎರಡು ದಿನಗಳ ಕಾಲ ನಡೆದಿದ್ದರೆ, ಈ ಬಾರಿ ಮಿನಿ ಹರಾಜು ಆಗಿರುವ ಕಾರಣ ಒಂದೇ ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ನಡುವೆ, ಎಲ್ಲಾ 10 ಫ್ರಾಂಚೈಸಿಗಳೂ ರಿಟೈನ್ ಮತ್ತು ರಿಲೀಸ್ ಪಟ್ಟಿಗಳನ್ನು ಲೀಗ್ ಆಡಳಿತಕ್ಕೆ ಸಲ್ಲಿಸಿದ್ದು, ತಂಡ ನಿರ್ಮಾಣದ ಎರಡನೇ ಹಂತಕ್ಕೆ ಈಗಾಗಲೇ ಕಾಲಿಟ್ಟಿವೆ. ನಿಯಮ ಪ್ರಕಾರ ಗರಿಷ್ಠ 25 ಆಟಗಾರರನ್ನು ಹೊಂದುವ ಅವಕಾಶವಿರುವ ಫ್ರಾಂಚೈಸಿಗಳಲ್ಲಿ ಹೆಚ್ಚಿನವರು ತಮ್ಮ ಮುಖ್ಯ ಆಟಗಾರರನ್ನು ಉಳಿಸಿಕೊಂಡಿರುವುದರಿಂದ, ಕೆಲವು ಸೀಮಿತ ಖಾಲಿ ಸ್ಥಾನಗಳಿಗಾಗಿ ಮಾತ್ರ ಸ್ಪರ್ಧೆ ನಡೆಯಲಿದೆ.

10 ತಂಡಗಳು ಒಟ್ಟು 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಉಳಿದ 77 ಸ್ಲಾಟ್‌ಗಳಿಗೆ ಮಾತ್ರ ಹರಾಜು ನಡೆಯಲಿದೆ. ಹರಾಜಿನ ಮೊದಲು ಆಟಗಾರರ ನೋಂದಣಿ ಪ್ರಕ್ರಿಯೆ ನೆರವೇರಲಿದ್ದು, ನಂತರ ಶಾರ್ಟ್ ಲಿಸ್ಟ್ ತಯಾರಾಗುತ್ತದೆ. ಈ ಪಟ್ಟಿಯಲ್ಲಿ ಹೆಸರು ಇರುವ ಆಟಗಾರರೇ ಅಬುಧಾಬಿಯಲ್ಲಿ ನಡೆಯಲಿರುವ ಮಿನಿ ಆಕ್ಷನ್ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

error: Content is protected !!