ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರದ ಸಿದ್ಧತೆಗಳು ನಡೆದಿದ್ದು, ಕೆಂಪುಕೋಟೆಯಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ.
ಈ ಸಮಾರಂಭದಲ್ಲಿ 7000 ಮಂದಿ ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ. ಇದೇ ವೇಳೆ, 10ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಬಹುಹಂತಗಳ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಈ ಬಾರಿ ಮುಖ ಗುರುತಿಸುವ ವ್ಯವಸ್ಥೆ (ಎಫ್ಆರ್ಎಸ್) ಕ್ಯಾಮರಾಗಳನ್ನು ಕೂಡಾ ಕೆಂಪುಕೋಟೆ ಪ್ರವೇಶಿಸುವ ದ್ವಾರದ ಬಳಿ ಸ್ಥಾಪಿಸಲಾಗಿದೆ. ಪ್ರದೇಶದಲ್ಲಿ ರಾಡಾರ್ಗಳನ್ನು ನಿಯೋಜಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ನಾವು ಅತ್ಯಂತ ನಿಖರತೆಯ ಭದ್ರತಾ ಕ್ಯಾಮರಾಗಳನ್ನು ಕೆಂಪುಕೋಟೆಯ ಸುತ್ತ ಸ್ಥಾಪಿಸಿದ್ದೇವೆ. ಇದರ ದಿನದ 24 ಗಂಟೆಗಳ ಕಾಲವೂ ನಿಗಾ ಇಟ್ಟಿದ್ದೇವೆ. ಈ ಬಾರಿ ಅತಿಥಿಗಳ ಸಂಖ್ಯೆ 7000 ಕ್ಕೇರಿದೆ. ಪ್ರವೇಶ ದ್ವಾರದಲ್ಲಿ ಎಫ್ಆರ್ಎಸ್ ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಏನೆಲ್ಲ ನಿಷೇಧ?
ಬುತ್ತಿ, ನೀರಿನ ಬಾಟಲಿ, ರಿಮೋಟ್ ಕಂಟ್ರೋಲ್ ಕಾರ್ ಕೀ, ಸಿಗರೇಟ್ ಲೈಟರ್, ಬ್ರೀಫ್ಕೇಸು, ಕೈ ಚೀಲ, ಕ್ಯಾಮರಾ, ಬೈನಾಕ್ಯುಲರ್, ಕೊಡೆಗಳು ಮತ್ತು ಇತರ ವಸ್ತುಗಳನ್ನು ಕೆಂಪುಕೋಟೆಯ ಆವರಣದೊಳಗೆ ತರುವುದನ್ನು ನಿಷೇಧಿಸಲಾಗಿದೆ . ಗಾಳಿಪಟ. ಬಲೂನ್, ಚೀನಾ ಲಾಂದ್ರಗಳನ್ನು ಆ.13ರಿಂದ 15ರಂದು ಕಾರ್ಯಕ್ರಮ ಮುಗಿಯುವವರೆಗೆ ಹಾರಿಸುವಂತಿಲ್ಲ.