Sunday, November 16, 2025

ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ: ಸಾವಿನ ಸಂಖ್ಯೆ 29ಕ್ಕೆ ಏರಿಕೆ; ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾಮೂಹಿಕ ಸಾವು ಮುಂದುವರಿದಿದ್ದು, ಮೃಗಾಲಯದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ನವೆಂಬರ್ 13ರಿಂದ ಆರಂಭವಾದ ಸಾವುಗಳ ಸರಪಳಿಯಲ್ಲಿ ಈಗಾಗಲೇ 29 ಕೃಷ್ಣಮೃಗಗಳು ಪ್ರಾಣ ಕಳೆದುಕೊಂಡಿದ್ದು, ಇನ್ನೂ 9 ಕೃಷ್ಣಮೃಗಗಳಿಗೆ ತೀವ್ರ ಆರೈಕೆ ನೀಡಲಾಗುತ್ತಿದೆ. ನಿನ್ನೆ ಒಂದೇ ದಿನ 20 ಮೃಗಗಳು ಸಾವನ್ನಪ್ಪಿದ್ದ ಘಟನೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತ್ತು.

ಸಾಲುಸಾಲಾಗಿ ಮೃಗಗಳ ಸಾವಿಗೆ ನಿಖರ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮೃಗಾಲಯ ಆಡಳಿತ ಮೃತ ಮೃಗಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತ್ತು. ಇದೀಗ ತಜ್ಞ ಪಶುವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬಂದಿದ್ದು, ಗಾಳಲೆ ರೋಗ ಎಂದೂ ಕರೆಯಲ್ಪಡುವ ಬ್ಯಾಕ್ಟೀರಿಯಾ ಹಿಮೋರೇಜಿಕ್ ಸೇಪ್ಟಿಸಿಮೀಯಾ ಎಂಬ ಮಾರಕ ಬ್ಯಾಕ್ಟೀರಿಯಾ ಸೋಂಕಿಗೆ ಕೃಷ್ಣಮೃಗಗಳ ಸಾವಿಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಸಾವುಗಳ ಹಿನ್ನೆಲೆಯಲ್ಲಿ ಮೃಗಾಲಯ ಸಿಬ್ಬಂದಿ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾವನ್ನಪ್ಪಿದ 25 ಕೃಷ್ಣಮೃಗಗಳಿಗೆ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಮೂರು ಮೃಗಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಪಶು ಆರೋಗ್ಯ ಜೈವಿಕ ಸಂಸ್ಥೆಯಿಂದ ಬಂದಿರುವ ತಜ್ಞರಾದ ಡಾ. ಚಂದ್ರಶೇಖರ ಮತ್ತು ಡಾ. ಮಂಜುನಾಥ ಅವರು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆಗೆ ಮೃತ ಮೃಗಗಳ ಅಂಗಾಂಗ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ. ಅಂತಿಮ ವರದಿ ಮಂಗಳವಾರ ಲಭ್ಯವಾಗುವ ನಿರೀಕ್ಷೆ ಇದೆ.

error: Content is protected !!