March 15, 2026
Sunday, March 15, 2026
spot_img

ಸಮುದ್ರದ ಅಲೆಗಳಿಗೆ ಅಪ್ಪಳಿಸಿ ಮಗುಚಿದ ದೋಣಿ: ಮೀನುಗಾರರ ಪ್ರಾಣ ಉಳಿಸಿದ ಲೈಫ್ ಜಾಕೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಅಪ್ಪಳಿಸಿದ ಸಮುದ್ರದ ಭಾರೀ ಅಲೆಗೆ ಸಿಕ್ಕು ದೋಣಿ ಮಗುಚಿದ್ದು ಅದರಲ್ಲಿದ್ದ ೯ ಮೀನುಗಾರರು ಲೈಫ್ ಜಾಕೆಟ್ ಧರಿಸಿದ್ದರಿಂದ ದಡದಲ್ಲಿದ್ದ ಮೀನುಗಾರರು ನೀಡಿದ ರೋಪ್ ಹಿಡಿದು ಈಜಿ ಸುರಕ್ಷಿತವಾಗಿ ದಡ ಸೇರಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ಎಂಬಲ್ಲಿ ಭಾನುವಾರ ನಡೆದಿದೆ.

ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಸುರಕ್ಷಿತರಾಗಿ ದಡ ಸೇರಿದ ಮೀನುಗಾರರು.

ಭಾನುವಾರ ೧೧ ಗಂಟೆಯ ವೇಳೆಗೆ ಉಪ್ಪುಂದ ಶಾರದಾ ಖಾರ್ವಿ ಎನ್ನುವರ ಮಾಲೀಕತ್ವದ ಶಿವಪ್ರಸಾದ್ ದೋಣಿಯು ಮೀನುಗಾರಿಕೆಗೆ ಹೋಗುವಾಗ ಮಡಿಕಲ್ ಎಲ್.ಪಿ. ಸಮೀಪ ಅಲೆಗಳ ರಭಸಕ್ಕೆ ದೋಣಿ ಮಗುಚಿದ್ದು ೯ ಮಂದಿ ಮೀನುಗಾರರು ನೀರಿಗೆ ಬಿದ್ದಿದ್ದಾರೆ. ಎಲ್ಲರೂ ಲೈಪ್ ಜಾಕೆಟ್ ಹಾಕಿದ್ದು ಈಜುತ್ತಿದ್ದ ಅವರಿಗೆ ದಡದಲ್ಲಿದ್ದ ಇತರೆ ಮೀನುಗಾರರು ರೋಪ್ ನೀಡಿದ್ದು ಅದರ ಮೂಲಕ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ.

ದೋಣಿ ಮಗುಚಿದ ರಭಸಕ್ಕೆ ದೋಣಿಗೆ ಹಾನಿಯಾಗಿದ್ದಲ್ಲದೆ ಎಂಜಿನ್, ದೋಣಿಯಲ್ಲಿದ್ದ ಬಲೆ ಹಾಗೂ ಲಕ್ಷಾಂತರ ರೂ. ಮೌಲ್ಯದ ಸಲಕರಣೆಗಳು ನಷ್ಟವಾಗಿದೆ ಎಂದು ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !