ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂದು ಆ ದಿನ, ಉತ್ತರಾಖಂಡದ ಹಲ್ಧವನಿ ಪ್ರದೇಶದ ಆ ಮನೆಯ ಪಾಲಿಗೆ ದುಃಖದ ಸಂಗತಿಯೊಂದನ್ನು ಹೊತ್ತು ತಂದಿತ್ತು. ಭಾರತೀಯ ಸೇನೆ ಸೇರಿದ್ದ ಆ ಮನೆಯ ಸದಸ್ಯನೊಬ್ಬ ದೂರದ ಸಿಯಾಚಿನ್ನಿನ ಹಿಮಚ್ಛಾದಿತ ಬೆಟ್ಟಗಳಲ್ಲಿ ಕಣ್ಮರೆಯಾಗಿ ಹೋಗಿದ್ದ. 1984ರಲ್ಲಿ ಸಿಯಾಚಿನ್ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳಲು ಭಾರತೀಯ ಸೇನೆ ಪ್ರಾರಂಭಿಸಿದ್ದ ಆಪರೇಷನ್ ಮೆಘಧೂತ್ ನ ಭಾಗವಾಗಿ ಹೊರಟಿದ್ದ 20 ಸೈನಿಕರ ತಂಡವೊಂದು ಹಿಮಪಾತಕ್ಕೆ ಸಿಲುಕಿ ಕಣ್ಮರೆಯಾಗಿದ್ದರು. ದುರದೃಷ್ಟವೆಂದರೆ ಅವರಲ್ಲಿ ಕೇವಲ 12 ಮಂದಿಯ ಶರೀರ ಪತ್ತೆಯಾಗಿತ್ತು. ಪತ್ತೆಯಾಗದವರಲ್ಲಿ ಈ ಮನೆಯ ಸದಸ್ಯನೂ ಒಬ್ಬನಿದ್ದ. ದೇಶಕ್ಕಾಗಿ ಜೀವಕೊಟ್ಟ ಯೋಧನೊಬ್ಬನ ಮನೆಯವರಿಗೆ ಆತನ ದೇಹ ಸಿಗದೇ ಸರಿಯಾಗ ಅಂತ್ಯ ಸಂಸ್ಕಾರ ಮಾಡಲಾಗದ ದುಸ್ಥಿತಿ ಒದಗಿತ್ತು.
ಆದರೆ ಇತ್ತೀಚೆಗೆ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ಸದಸ್ಯರಿಗೆ ಹಿಮದಡಿಯಲ್ಲಿ 38 ವರ್ಷಗಳ ಹಿಂದೆ ಹೂತುಹೋಗಿದ್ದ ಸೈನಿಕನ ಮೃತ ದೇಹವೊಂದು ಪತ್ತೆಯಾಯಿತು. ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲಾ ಎಂಬ ಸೈನಿಕನ ಪಾರ್ಥೀವ ಶರೀರ ಅಲ್ಲಿ ತಣ್ಣಗೆ ಮಲಗಿತ್ತು. 19ನೇ ಕುಮಾಂವ್ ರೆಜಿಮೆಂಟಿನ ಸದಸ್ಯನಾಗಿದ್ದ ಆತನ ಶವವನ್ನು ಆತನ ಮನೆಗೆ ಕೊಂಡೊಯ್ಯಲಾಯಿತು. 38 ವರ್ಷಗಳಿಂದ ತನ್ನ ಪತಿಗೆ ಸರಿಯಾದ ಅಂತ್ಯ ಸಂಸ್ಕಾರ ಮಾಡಲಾಗದೆ ಕೊರಗುತ್ತಿದ್ದ ಆ ಹುತಾತ್ಮ ಸೈನಿಕನ ಹೆಂಡತಿಗೆ ಅದು ಸಂತೃಪ್ತಿಯ ಭಾವವನ್ನು ತಂದುಕೊಟ್ಟಿತು.
1975ರಲ್ಲಿ ಸೈನ್ಯ ಸೇರಿದ ಚಂದ್ರಶೇಖರ ಅವರು ಸೇನಾ ಕಾರ್ಯಾಚರಣೆಯಲ್ಲಿ ಕಣ್ಮರೆಯಾದಾಗ ಅವರ ಪತ್ನಿ ಶಾಂತಿ ದೇವಿಯವರಿಗಿನ್ನೂ ಕೇವಲ 25 ವರ್ಷ, ಅವರ ಮಕ್ಕಳಿಬ್ಬರಲ್ಲಿ ಒಬ್ಬಾಕೆಗೆ 4 ವರ್ಷವಾದರೆ ಇನ್ನೊಬ್ಬಳಿಗೆ ಕೇವಲ 2 ವರ್ಷ ವಯಸ್ಸು. ಅಂದು ತಂದೆಯನ್ನು ಕಳೆದುಕೊಂಡಿದ್ದ ಅವರಿಗೆ ಈಗ ಸತ್ತು ಮಲಗಿರುವ ತಂದೆಯ ಮುಖ ನೋಡುವ ಅವಕಾಶ ದೊರೆತಿತು. ಅಂದು ತರ್ಪಣ ಬಿಟ್ಟು ಮುಗಿಸಿದ ಇಷ್ಟು ವರ್ಷದ ನಂತರ ಪಾರ್ಥೀವ ಶರೀರಕ್ಕೆ ಅಂತ್ಯ ಸಂಸ್ಕಾರ ನೀಡುವ ಮುನ್ನ ಶಾಂತಿ ದೇವಿಯವರು ದೇಶಕ್ಕಾಗಿ ಪ್ರಾಣಕೊಟ್ಟ ಅವರ ಗಂಡನ ಬಗ್ಗೆ ಹೆಮ್ಮ ಪಡುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟು ವರ್ಷ ನೋವಿನಲ್ಲಿದ್ದ ಕುಟುಂಬಕ್ಕೆ ಈಗ ಸಂತೃಪ್ತಿ ದೊರೆತಿದೆ ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.
ಮನೆಗೆ ಬಂದ ಸೈನಿಕನ ಪಾರ್ಥೀವ ಶರೀರಕ್ಕೆ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅನೇಕ ಸೇನಾ ಸದಸ್ಯರು ಹಾಗೂ ಉತ್ತರಾಖಂಡದ ಸಿಎಂ ಪುಷ್ಕರ ಸಿಂಗ್ ಧಾಮಿ ಸೇರಿದಂತೆ ಅನೇಕರು ಹುತಾತ್ಮ ಸೈನಿಕನಿಗೆ ಗೌರವ ನಮನ ಸಲ್ಲಿಸಿದ್ದಾರೆ. ಮೃತ ಯೋಧ ಚಂದ್ರಶೇಖರ ಹರ್ಬೋಲಾ ಕುಟುಂಬಕ್ಕೆ ಅಗತ್ಯ ಸಹಾಯ ಹಾಗೂ ಹುತಾತ್ಮನ ನೆನಪಿನಲ್ಲಿ ಸೈನಿಕಧಾಮವನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಅಂತೂ ಸರಿಯಾದ ಅಂತ್ಯ ಸಂಸ್ಕಾರಕ್ಕೆ ಅವಕಾಶ ಸಿಕ್ಕಿದ್ದಕೆ ಆ ಕಟುಂಬಕ್ಕೆ ಕೊಂಚ ನೆಮ್ಮದಿ ದೊರೆತಿದೆ.