Monday, November 17, 2025

ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ವೈಭವದ ಚಾಲನೆ; ಈ ಬಾರಿ 5 ದಿನಗಳ ಜಾತ್ರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಹೆಗ್ಗುರುತುಗಳಲ್ಲಿ ಒಂದಾದ, ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ಇಂದು ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ನಗರದ ಪಾಲಿಗೆ ಇದು ಕೇವಲ ಮಾರಾಟ ಮೇಳವಲ್ಲ, ಬದಲಿಗೆ ಸಡಗರ ಸಂಭ್ರಮದ ಹಬ್ಬವೇ ಸರಿ.

ದೊಡ್ಡಬಸವಣ್ಣನಿಗೆ ಅಭಿಷೇಕ, ಹಬ್ಬದ ವಾತಾವರಣ:

ಬೆಳಗ್ಗೆಯೇ ಬಸವನಗುಡಿಯ ದೊಡ್ಡ ಬಸವಣ್ಣನ ದೇಗುಲದಲ್ಲಿ ಕಡಲೆಕಾಯಿ ಅಭಿಷೇಕ ನೆರವೇರಿಸುವ ಮೂಲಕ ಪರಿಷೆಯ ಸಂಪ್ರದಾಯಕ್ಕೆ ಚಾಲನೆ ನೀಡಲಾಯಿತು. ದೊಡ್ಡ ಗಣಪತಿ ಗುಡಿ ಮತ್ತು ದೊಡ್ಡ ಬಸವಣ್ಣನ ದೇಗುಲಕ್ಕೆ ಭಕ್ತಾದಿಗಳು ನಿನ್ನೆಯಿಂದಲೇ ಭೇಟಿ ನೀಡುತ್ತಿದ್ದು, ಜಾತ್ರೆಯ ರಂಗು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ವೈಶಿಷ್ಟ್ಯಗಳು ಮತ್ತು ಬದಲಾವಣೆಗಳು:

ಅವಧಿ ವಿಸ್ತರಣೆ: ಪ್ರತಿ ವರ್ಷ ಎರಡು ದಿನಗಳಿಗೆ ಮುಗಿಯುತ್ತಿದ್ದ ಈ ಜಾತ್ರೆಯನ್ನು ಇದೇ ಮೊದಲ ಬಾರಿಗೆ ಐದು ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ. ಇದು ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.

ಹೊರ ರಾಜ್ಯಗಳ ವ್ಯಾಪಾರಿಗಳು: ಕೇವಲ ರಾಜ್ಯ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ವ್ಯಾಪಾರಿಗಳು ಆಗಮಿಸಿದ್ದು, ವಿವಿಧ ಬಗೆಯ ತಾಜಾ ಕಡಲೆಕಾಯಿ ರಾಶಿಗಳು ಸಿಟಿ ಮಂದಿಯ ನಾಲಿಗೆ ರುಚಿ ಹೆಚ್ಚಿಸಲು ಸಜ್ಜಾಗಿವೆ.

ಪ್ಲಾಸ್ಟಿಕ್ ಮುಕ್ತ ಪರಿಷೆ: ಈ ಬಾರಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಮಹತ್ವದ ಹೆಜ್ಜೆ ಇಡಲಾಗಿದೆ. ಸ್ವಯಂಸೇವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ವ್ಯಾಪಾರಿಗಳಿಗೆ ಪೇಪರ್ ಬ್ಯಾಗ್​ಗಳನ್ನು ವಿತರಿಸಿ, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಬಸವನಗುಡಿಯ ಬೀದಿಗಳು ಈಗಾಗಲೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ‘ಬಡವರ ಬಾದಾಮಿ’ ಎಂದೇ ಖ್ಯಾತವಾದ ಕಡಲೆಕಾಯಿಯ ರಾಶಿಗಳು ಕಣ್ಮನ ಸೆಳೆಯುತ್ತಿವೆ. ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ವ್ಯಾಪಾರಿಗಳು ತಮ್ಮ ಜಾಗಗಳಲ್ಲಿ ಕಡಲೆಕಾಯಿ ರಾಶಿ ಹಾಕಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿರುವ ಕಾರಣ, ಪೊಲೀಸ್ ಇಲಾಖೆ ಕೂಡ ದೇಗುಲದ ಸುತ್ತಮುತ್ತ ಹಾಗೂ ಪರಿಷೆ ನಡೆಯುವ ಬೀದಿಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಿದೆ. ಆಧುನಿಕ ಜೀವನದ ಜಂಜಾಟದಲ್ಲಿ ಸುಸ್ತಾಗಿದ್ದ ಬೆಂಗಳೂರಿಗರು ಈ ಜಾತ್ರೆಯಲ್ಲಿ ರೌಂಡ್ ಹಾಕಿ ರಿಲ್ಯಾಕ್ಸ್ ಆಗಲು ಸಜ್ಜಾಗಿದ್ದು, ಒಟ್ಟಾರೆ ಬಸವನಗುಡಿಯ ಸುತ್ತಮುತ್ತ ಹಬ್ಬದ ಸಂಭ್ರಮ ಸೃಷ್ಟಿಯಾಗಿದೆ.

error: Content is protected !!