Monday, November 17, 2025

India vs South Africa | ನಮ್ಮ ಸೋಲಿಗೆ ಅವರಿಬ್ಬರೇ ಕಾರಣ: ರಿಷಭ್ ಪಂತ್ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅನಿರೀಕ್ಷಿತ ಸೋಲನುಭವಿಸಿದೆ. ಪಂದ್ಯ ಆರಂಭದಿಂದಲೇ ಎರಡೂ ತಂಡಗಳು ಕುಸಿತಗಳ ಸರಮಾಲೆಯನ್ನು ನೋಡಿದರೂ, ಅಲ್ಪ ಗುರಿಯನ್ನು ಚೇಸ್ ಮಾಡಲು ವಿಫಲವಾದ ಭಾರತ ದೊಡ್ಡ ನಿರಾಶೆ ಮೂಡಿಸಿತು.

ಸೌತ್ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 159 ರನ್‌ಗಳಿಗೆ ಆಲೌಟ್ ಆಗಿದ್ದರೂ, ಭಾರತ 189 ರನ್ ಗಳಿಸಿ 30 ರನ್ ಮುನ್ನಡೆ ಪಡೆಯಿತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ಆಫ್ರಿಕಾ ತಂಡ ಮತ್ತೊಮ್ಮೆ 153 ರನ್‌ಗಳಿಗೆ ಕುಸಿಯಿತು. ಈ ಮೂಲಕ 124 ರನ್‌ಗಳ ಸರಳ ಗುರಿ ಭಾರತಕ್ಕೆ ಸಿಕ್ಕಿತ್ತು. ಆದರೆ ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಸಂಪೂರ್ಣವಾಗಿ ಹಿಮ್ಮೆಟ್ಟಿದ್ದು, ಕೇವಲ 93 ರನ್‌ಗಳಿಗೆ ಆಲೌಟ್ ಆಗಿ 30 ರನ್‌ಗಳ ಅಂತರದಲ್ಲಿ ಸೋಲು ಒಪ್ಪಿಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ಹಂಗಾಮಿ ನಾಯಕ ರಿಷಭ್ ಪಂತ್, “ಇಂತಹ ಪಿಚ್‌ನಲ್ಲಿ 120 ರನ್‌ಗಳ ಚೇಸ್ ಕೂಡ ಕಷ್ಟವಾಗುತ್ತದೆ ಎನ್ನುವುದು ಗೊತ್ತಿತ್ತು. ಆದರೂ ನಾವು ಒತ್ತಡವನ್ನು ನಿಭಾಯಿಸಲು ವಿಫಲರಾದೆವು. ಸೌತ್ ಆಫ್ರಿಕಾ ಬೌಲರ್‌ಗಳು ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡರು” ಎಂದು ವಿಷಾದ ವ್ಯಕ್ತಪಡಿಸಿದರು. ಅವರು ಮುಂದಿನ ಗುವಾಹಟಿ ಟೆಸ್ಟ್‌ನಲ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಈ ಪಂದ್ಯದ ತಿರುವು ಟೆಂಬಾ ಬವುಮಾ ಮತ್ತು ಕಾರ್ಬಿನ್ ಬಾಷ್ ಅವರ 8ನೇ ವಿಕೆಟ್‌ಗೆ ಬಂದ 44 ರನ್‌ಗಳ ಅಮೂಲ್ಯ ಜೊತೆಯಾಟವಾಗಿತ್ತು. ಇವರಿಬ್ಬರ ಸ್ಥಿರತೆಯೇ ಪಂದ್ಯದ ದಿಕ್ಕು ಬದಲಿಸಿತು. ಅವರಿಬ್ಬರ ಆಟವೇ ನಮ್ಮ ಸೋಲಿಗೆ ಕಾರಣ ಎಂದು ಪಂತ್ ಸರಳವಾಗಿ ಒಪ್ಪಿಕೊಂಡರು. ಈ ಸೋಲು ನೋವುಂಟು ಮಾಡಿದೆ. ಇದಾಗ್ಯೂ ಗುವಾಹಟಿಯಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ನಾವು ಕಂಬ್ಯಾಕ್ ಮಾಡುತ್ತೇವೆ ಎಂದು ಇದೇ ವೇಳೆ ರಿಷಭ್ ಪಂತ್ ಹೇಳಿದ್ದಾರೆ.

error: Content is protected !!