Monday, November 17, 2025

ದೆಹಲಿ ಅಂಗಳದಲ್ಲಿ ಕರ್ನಾಟಕ ರಾಜಕಾರಣದ ಸದ್ದು: ಒಂದು ಕಡೆ ಪಕ್ಷದ ಬಲ, ಇನ್ನೊಂದು ಕಡೆ ರಾಜ್ಯದ ಹಿತಾಸಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ ಕ್ರಾಂತಿಯಂತಹ ರಾಜಕೀಯ ಚರ್ಚೆಗಳ ನಡುವೆಯೇ, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ ಉದ್ದೇಶವನ್ನು ಸ್ವತಃ ಡಿಸಿಎಂ ಅವರೇ ಬಹಿರಂಗಪಡಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಕರ್ನಾಟಕದಲ್ಲಿ ಸಂಪುಟ ಪುನಾರಚನೆ ಅಥವಾ ಯಾವುದೇ ತೀವ್ರ ರಾಜಕೀಯ ಚಟುವಟಿಕೆಗಳು ಸದ್ಯಕ್ಕೆ ಗರಿಗೆದರಿಲ್ಲ ಎಂದು ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷರೊಂದಿಗಿನ ತಮ್ಮ ಭೇಟಿ ಕೇವಲ ಪಕ್ಷದ ಸಾಮಾನ್ಯ ಮತ್ತು ಸಂಘಟನಾ ವಿಚಾರಗಳ ಬಗ್ಗೆ ಚರ್ಚಿಸಲು ಹೊರತು, ಯಾವುದೇ ವಿಶೇಷ ಅಥವಾ ನಿರ್ಣಾಯಕ ರಾಜಕೀಯ ನಿರ್ಧಾರಗಳಿಗಾಗಿ ಅಲ್ಲ ಎಂದು ಅವರು ಹೇಳಿದರು.

“ಕಾಂಗ್ರೆಸ್ ಪಕ್ಷ ಇದ್ದರೆ ಮಾತ್ರ ನಾವು ಎಲ್ಲರೂ. ಪಕ್ಷದ ವಿಚಾರಗಳ ಕುರಿತು ಚರ್ಚೆ ನಡೆಸುವುದು ಸಹಜ. ಯಾವುದೇ ‘ನವೆಂಬರ್ ಕ್ರಾಂತಿ’ ಇಲ್ಲ, ಸಂಪುಟದ ಪುನಾರಚನೆಯ ಚರ್ಚೆಗಳೆಲ್ಲ ಕೇವಲ ಊಹಾಪೋಹ,” ಎಂದು ಡಿಸಿಎಂ ಅವರು ಅಭಿಪ್ರಾಯಪಟ್ಟರು. ಈ ಮೂಲಕ ಕರ್ನಾಟಕ ರಾಜಕಾರಣದಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ಅವರು ಸದ್ಯಕ್ಕೆ ತೆರೆ ಎಳೆದಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಮೋದಿ ಭೇಟಿ: ಕಬ್ಬು ಬೆಳೆಗಾರರ ಸಮಸ್ಯೆ, ನೀರಾವರಿ ಯೋಜನೆಗಳ ಪ್ರಸ್ತಾಪ ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ 5 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ರಾಜ್ಯದ ಹಿತಾಸಕ್ತಿಗಳನ್ನು ಪ್ರಧಾನಿಯವರ ಗಮನಕ್ಕೆ ತರುವುದೇ ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ಈ ಮಹತ್ವದ ಭೇಟಿಯಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳಾದ ಕಬ್ಬು ಬೆಳೆಗಾರರ ಸಮಸ್ಯೆಗಳು, ಬೆಳೆ ಹಾನಿ ಪರಿಹಾರದ ಕುರಿತು ಕೇಂದ್ರದ ನೆರವು, ಹಾಗೂ ರಾಜ್ಯದ ಮಹತ್ವದ ನೀರಾವರಿ ಯೋಜನೆಗಳ ಅನುಮೋದನೆ ಕುರಿತು ಸಿದ್ದರಾಮಯ್ಯ ಅವರು ಪ್ರಧಾನಿಯೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!