Monday, November 17, 2025

4 ದಿನ ಕಳೆದರೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ: ಒಂದೊಂದಾಗಿ ಜೀವ ಕಳೆದುಕೊಳ್ಳುತ್ತಿರುವ ಕೃಷ್ಣಮೃಗಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯ ಹೊರವಲಯದಲ್ಲಿರುವ ಐತಿಹಾಸಿಕ ರಾಣಿ ಚೆನ್ನಮ್ಮ ಕಿರುಮೃಗಾಲಯದಲ್ಲಿ ನಡೆದಿರುವ ಸರಣಿ ಕೃಷ್ಣಮೃಗಗಳ ಸಾವಿನಿಂದಾಗಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಕೃಷ್ಣಮೃಗಗಳು ಒಂದೊಂದಾಗಿ ಸಾವನ್ನಪ್ಪುತ್ತಿದ್ದು, ಈಗ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಬ್ಯಾಕ್ಟೀರಿಯಾ ಸೋಂಕು ಶಂಕೆ:

ನಿನ್ನೆ ಮತ್ತೆ ಎರಡು ಕೃಷ್ಣಮೃಗಗಳು ಸಾವನ್ನಪ್ಪಿವೆ. ವೈದ್ಯರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣಮೃಗಗಳಿಗೆ ಹಸು ಮತ್ತು ಎಮ್ಮೆಗಳಲ್ಲಿ ಕಾಣಿಸಿಕೊಳ್ಳುವಂತಹ ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕು ತಗುಲಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸೋಂಕಿನಿಂದಾಗಿ ಪ್ರಾಣಿಗಳು ತ್ವರಿತವಾಗಿ ಸಾವನ್ನಪ್ಪುತ್ತಿವೆ. ಉಳಿದಿರುವ ಕೃಷ್ಣಮೃಗಗಳನ್ನು ಉಳಿಸುವುದೂ ಕಷ್ಟಕರವಾಗಬಹುದು ಎಂಬ ಆತಂಕಕಾರಿ ಹೇಳಿಕೆಯನ್ನು ವೈದ್ಯರು ನೀಡಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪ:

ಈ ಸಾಮೂಹಿಕ ಸಾವಿನ ಕುರಿತು ಸ್ಥಳೀಯವಾಗಿ ಮತ್ತು ಸಾರ್ವಜನಿಕ ವಲಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯ ನಾಗೇಶ್ ಅವರ ಮೇಲೆ ತೀವ್ರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ನವೆಂಬರ್ 13 ರಂದು ಬರೋಬ್ಬರಿ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಆಾಗಲೇ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರೂ, ಆ ನಂತರದ ನಾಲ್ಕು ದಿನಗಳಲ್ಲಿ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎಂದು ದೂರು ಕೇಳಿಬಂದಿದೆ.

ಕ್ವಾರಂಟೈನ್ ವೈಫಲ್ಯದ ಪ್ರಶ್ನೆ:

ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡಿದ್ದರೆ, ಉಳಿದ ಕೃಷ್ಣಮೃಗಗಳನ್ನು ಸೋಂಕು ಹರಡದಂತೆ ಬೇರೆಡೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡುವ ಅವಕಾಶವಿತ್ತು. ಆದರೆ, ರವಿವಾರದಂದು ಪ್ರಾಣಿಗಳ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವೂ ಇದೆ.

ಸಾವನ್ನಪ್ಪಿದ ಒಟ್ಟು 20 ಕೃಷ್ಣಮೃಗಗಳ ಪೈಕಿ ಮೂರನ್ನು ಶೈತ್ಯಾಗಾರದಲ್ಲಿ ಇರಿಸಲಾಗಿದ್ದು, ಉಳಿದ ಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸದ್ಯ, ಉಳಿದಿರುವ ಕೆಲವೇ ಕೃಷ್ಣಮೃಗಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಬೆಳಗಾವಿ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಈ ಮೃಗಾಲಯದ ಪ್ರಾಣಿಗಳು ಈ ರೀತಿ ನಿಗೂಢವಾಗಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯವರ ಬೇಜವಾಬ್ದಾರಿಯೋ ಅಥವಾ ಯಾವುದೋ ಹೊಸ ವೈರಸ್ ಅಥವಾ ಬ್ಯಾಕ್ಟೀರಿಯಾದ ಹಾವಳಿಯೋ ಎಂಬುದು ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.

error: Content is protected !!