ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ವಾತಾವರಣವನ್ನು ಕಾಪಾಡುವುದು ಈಗ ಕೇವಲ ಜವಾಬ್ದಾರಿಯಷ್ಟೇ ಅಲ್ಲ, ನಿಯಮ ಪಾಲನೆಯ ಕರ್ತವ್ಯವೂ ಆಗಿದೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಅಧಿಕಾರಿಗಳು ಹೊಸ ಕಾನೂನು ಕ್ರಮಕ್ಕೆ ಕೈ ಹಾಕಿದ್ದು, ಕಸ ಸುಡುವಂತಹ ಅಕ್ರಮಗಳಿಗೆ ಕಠಿಣ ಶಿಕ್ಷೆಗಳೇ ಉತ್ತರವಾಗಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ(ಬಿಎಸ್‌ಡಬ್ಲ್ಯೂಎಂಎಲ್) ನಗರದಲ್ಲಿ ಕಸ ಸುಡುವ ಪ್ರಕರಣಗಳ ವಿರುದ್ಧ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಗಳ ಹೊರಭಾಗದಲ್ಲಿ ಕಸವನ್ನು ಸುಟ್ಟರೆ, ಪರಿಸರ ಸಂರಕ್ಷಣಾ ಕಾಯ್ದೆಯಡಿ ₹1 ಲಕ್ಷ ರೂ.ವರೆಗಿನ ದಂಡ ಹಾಗೂ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಲಿದೆ.
ಈ ಮೊದಲು ಕಸ ಎಸೆಯುವವರ ಮನೆ ಮುಂದೆಯೇ ಕಸ ಸುರಿದು ದಂಡ ವಿಧಿಸಲಾಗುತ್ತಿತ್ತು. ಆದರೆ ಕಸ ಸುಡುವುದರಿಂದ ನೇರವಾಗಿ ವಾಯುಮಾಲಿನ್ಯ ಉಂಟಾಗುತ್ತಿರುವುದರಿಂದ ಕಠಿಣ ಕ್ರಮವು ಅನಿವಾರ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.
ಅದೇ ಸಮಯದಲ್ಲಿ, ಬಿಎಸ್‌ಡಬ್ಲ್ಯೂಎಂಎಲ್ ಸಾರ್ವಜನಿಕರಿಗೆ ಜಾಗೃತಿ ಕರೆ ನೀಡಿದೆ. ಯಾರಾದರೂ ಕಸ ಸುಡುತ್ತಿರುವುದು ಕಂಡುಬಂದರೆ ಅದರ ವಿಡಿಯೋ ಅಥವಾ ಮಾಹಿತಿ ಇಲಾಖೆಗೆ ಕಳುಹಿಸಲು ವಿನಂತಿಸಿದೆ. ಕಸವನ್ನು ಸುಡುವ ಬದಲಿಗೆ ಸಂಸ್ಕರಣಾ ಘಟಕಗಳಿಗೆ ಕಳುಹಿಸಲಾಗುವುದರಿಂದ, ಆ ಕಸದ ಮೂಲಕ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗುತ್ತದೆ.
ನಗರದ ಸ್ವಚ್ಛತೆ ಹಾಗೂ ವಾತಾವರಣ ರಕ್ಷಣೆಗೆ ಈ ಹೊಸ ನಿಯಮ ಮಹತ್ವದ ಹೆಜ್ಜೆಯಾಗಿದ್ದು, ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

