Wednesday, November 19, 2025

ರಾಹುಲ್‌ ಗಾಂಧಿಕ್ಕಿಂತ ಅಖಿಲೇಶ್‌ ಯಾದವ್ ಉತ್ತಮ: ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕಿನ ಮುನ್ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ದೊಡ್ಡ ಆಘಾತವನ್ನೇ ನೀಡಿದ್ದು, ಇದರ ಬೆನ್ನಲ್ಲೇ I.N.D.I.A ಬಣದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

ಸಮಾಜವಾದಿ ಪಕ್ಷದ ಶಾಸಕರೊಬ್ಬರು ಪಕ್ಷದ ಮುಖ್ಯಸ್ಥ ಮತ್ತು ಕನ್ನೌಜ್ ಸಂಸದ ಅಖಿಲೇಶ್ ಯಾದವ್ ಅವರು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಬೇಕು ಮತ್ತು ದೇಶದ ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಸ್ವಂತವಾಗಿ ಸರ್ಕಾರ ರಚಿಸಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.

ಲಕ್ನೋ ಸೆಂಟ್ರಲ್ ಕ್ಷೇತ್ರದ ಶಾಸಕ ರವಿದಾಸ್ ಮೆಹ್ರೋತ್ರಾ, ಚುನಾವಣೆ ನಡೆಸಲು ಬ್ಯಾಲೆಟ್ ವಿಧಾನವನ್ನು ಬಳಸಿದ್ದರೆ ಮೈತ್ರಿಕೂಟ ಬಿಹಾರದಲ್ಲಿ ಸರ್ಕಾರ ರಚಿಸುತ್ತಿತ್ತು ಎಂದು ಹೇಳಿದ್ದಾರೆ. ಅಖಿಲೇಶ್ ಯಾದವ್ ಪದೇ ಪದೇ ಬ್ಯಾಲೆಟ್ ಮತದಾನಕ್ಕೆ ಮರಳುವಂತೆ ಒತ್ತಾಯಿಸುತ್ತಿದ್ದಾರೆ ಮತ್ತು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ ಅವರೊಬ್ಬರು ಸಮರ್ಥ ನಾಯಕ ಎಂದು ಅವರು ಹೇಳಿದ್ದಾರೆ.

I.N.D.I.A ಒಕ್ಕೂಟವನ್ನು ಮುನ್ನಡೆಸಲು ಕಾಂಗ್ರೆಸ್‌ ನಾಯಕರಿಗಿಂತ ಅಖಿಲೇಶ್‌ ಸಮರ್ಥರಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದರ ಜೊತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಬೆಂಬಲ ಇಲ್ಲದೆಯೂ ನಾವು ಅಧಿಕಾರಕ್ಕೆ ಏರಬಹುದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಮಹತ್ವದ್ದಾಗಿವೆ.

2020 ರ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದ ದೇಶದ ಪ್ರಮುಖ ವಿರೋಧ ಪಕ್ಷವು ಈ ಬಾರಿ ಕೇವಲ ಆರು ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ಉನ್ನತ ನಾಯಕರು ಚುನಾವಣೆಗೆ ಮುನ್ನ ಹಲವಾರು ರ್ಯಾಲಿಗಳನ್ನು ನಡೆಸಿದ್ದರೂ ಬಿಹಾರದಲ್ಲಿ ಯಾವುದೇ ಗೆಲುವು ತಂದು ಕೊಡಲಿಲ್ಲ.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿದ್ದ ಪ್ರಮುಖ ವಿರೋಧ ಪಕ್ಷವು ಆ ನಂತರದ ರಾಜ್ಯ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ಕಳೆದ ವರ್ಷ ನಡೆದ ಎಂಟು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋಲನ್ನು ಕಂಡಿದೆ.

error: Content is protected !!