ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಷಣದಿಂದ ಪ್ರೇಕ್ಷಕರ ಹೃದಯದವರೆಗೂ, ನಗುವನ್ನು, ಭಾವನೆಗಳನ್ನು ಮತ್ತು ನಿಸ್ಸೀಮ ಮನರಂಜನೆಯನ್ನು ನೀಡುತ್ತ ಬಂದಿರುವ ‘ನವರಸ ನಾಯಕ’ ಜಗ್ಗೇಶ್ ಅವರು ತಮ್ಮ ಅದ್ಭುತ ಅಭಿನಯ ಪ್ರಯಾಣಕ್ಕೆ ನವೆಂಬರ್ 17ರಂದು 45 ವರ್ಷಗಳು ಪೂರೈಸಿದ್ದಾರೆ. ನಾಲ್ಕೂವರೆ ದಶಕಗಳ ಸಿನಿ ಬದುಕಿನಲ್ಲಿ ಅನೇಕ ಏಳು-ಬೀಳುಗಳ ನಡುವೆಯೂ ತಮ್ಮದೇ ಶೈಲಿ, ವಿಭಿನ್ನ ಹಾಸ್ಯ ಮತ್ತು ನೈಜ ನಟನೆಯ ಮೂಲಕ ಜಗ್ಗೇಶ್ ಅವರು ಗಳಿಸಿರುವ ಸ್ಥಾನ ಅಪ್ರತಿಮ. ಈ ಸಂಭ್ರಮದ ಸಂದರ್ಭದಲ್ಲೇ ಅವರು ತಮ್ಮ ಮೊದಲ ದಿನದ ನೆನಪುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದಿಂದಲೇ ಹೊತ್ತಿದ್ದ ಅಭಿನಯದ ಕನಸು ಮೊದಲ ಹೆಜ್ಜೆ ಇಟ್ಟ ದಿನದ ನೆನಪುಗಳನ್ನು ಹಂಚಿಕೊಂಡಿದ್ದಾರೆ. “1980ರ ನವೆಂಬರ್ 17. ನನಗೆ ಆಗ 18 ವರ್ಷದಷ್ಟೆ. ‘ಕನ್ನಡತಿ ಮಾನವತಿ’ ಎಂಬ ಚಿತ್ರದಲ್ಲಿ ನಾನು ಮೊದಲ ಬಣ್ಣ ಹಚ್ಚಿಸಿಕೊಂಡೆ,” ಎಂದು ಅವರು ಬರಹ ಆರಂಭಿಸಿದ್ದಾರೆ. ಗುಬ್ಬಿಯಲ್ಲಿ ನಡೆದ ಚಿತ್ರೀಕರಣ, ಅಂಬರೀಶ್ ಅವರಿಗೆ ಮೇಕಪ್ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಅವರ ಶಿಷ್ಯ ಕೃಷ್ಣ ಮೊದಲ ಮೇಕಪ್ ಹಚ್ಚಿದ್ದ ಕ್ಷಣಗಳು ಜಗ್ಗೇಶ್ ಅವರ ಮನಸ್ಸಿನಲ್ಲಿ ಇನ್ನೂ ಹಚ್ಚ ಹಚ್ಚವೆ. ಪಾತ್ರ ನೀಡಿದ ಸ್ನೇಹಿತ ಶಂಭು, ಮೀಸೆ ಬರೆದ ಹಾಸ್ಯನಟ ರನ್ನಾಕರ್, ಚಿತ್ರದ ನಾಯಕ ರಾಮಕೃಷ್ಣ ಮತ್ತು ನಾಯಕಿ ಪ್ರಮೀಳ ಜೋಯ್ಸ್ ಎಲ್ಲರ ನೆನಪುಗಳನ್ನು ಅವರು ಪುನರುಜ್ಜೀವಗೊಳಿಸಿದ್ದಾರೆ. ಈ ಚಿತ್ರ ಬಿಡುಗಡೆಯಾಗದಿದ್ದರೂ, ಅದೇ ಅನುಭವವೇ ಅವರಿಗೆ ಮತ್ತೊಂದು ಬಾಗಿಲು ತೆರೆಯಿತೆಂದು ಜಗ್ಗೇಶ್ ಬರೆದಿದ್ದಾರೆ.
ಅವರ ಅದೃಷ್ಟದ ಮರುಮುಖವಾಗಿ, ನಿರ್ದೇಶಕ ಸಿದ್ದಲಿಂಗಯ್ಯ ರವರ ಪುತ್ರ ಮುರಳಿ ಅವರ ‘ಬಿಳಿ ಗುಲಾಬಿ’ ಚಿತ್ರ, ಪುಟ್ಟಣ್ಣ ಕಣಗಲ್ ಅವರ ಸಹಾಯಕ ನಿರ್ದೇಶಕ ಅರಕಲಗೂಡು ನಂಜುಂಡ ನೀಡಿದ ಅವಕಾಶ ಇವುಗಳು ಜಗ್ಗೇಶ್ ಅವರ ಸಿನಿ ಬದುಕಿನ ದಿಕ್ಕನ್ನು ಬದಲಿಸಿದವು. ನಂತರ ಕೆ.ವಿ. ಜಯರಾಂ ಅವರ ‘ಇಬ್ಬನಿ ಕರಗಿತು’, ‘ಶ್ವೇತ ಗುಲಾಬಿ’, ‘ಪರಿಮಳ’, ‘ನಾನು ಮದುವೆಯಾಗಿ’, ‘ಸ್ಟೇಷನ್’, ‘ಸುಪ್ರೀಂ ಕೋರ್ಟು’, ‘ಅವಾಂತರ’ ಸೇರಿದಂತೆ ಹಲವು ಚಿತ್ರದ ಮೂಲಕ ಅವರು ತಮ್ಮ ನಟನೆಯ ಪಯಣವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಕಾಲಕ್ರಮೇಣ ವಿಭಿನ್ನ ಪಾತ್ರಗಳು, ಜನಮನ ಗೆದ್ದ ಹಾಸ್ಯ, ಕಣ್ಣೀರು ತರಿಸುವ ಭಾವನೆ ಎಲ್ಲವು ಜಗ್ಗೇಶ್ ಅವರಿಗೆ ಕನ್ನಡ ಸಿನಿ ಪ್ರೇಕ್ಷಕರ ಪ್ರೀತಿಯ ಚಪ್ಪಾಳಿಗಳನ್ನು ತಂದುಕೊಟ್ಟವು.
“ಇಂದಿಗೆ ನನ್ನ ಸಿನಿಮಾ ಪ್ರಯಾಣಕ್ಕೆ 45 ವರ್ಷ. ನಡೆದು ಬಂದ ದಾರಿ ನೆನಪಿನ ಬುತ್ತಿ. ಮುಂದೆಯೂ ಪ್ರೀತಿ ಹಾಗೆಯೇ ಇರಲಿ. ನನ್ನಂತೆ ಹೊಸ ಕಲಾವಿದರು ಬೆಳೆಯಲಿ,” ಎಂದು ಅವರು ಬರೆದುಕೊಂಡಿದ್ದಾರೆ.
ಚಿತ್ರರಂಗದಲ್ಲಿ ಅಜರಾಮರ ಸ್ಥಾನ ಪಡೆದ ಜಗ್ಗೇಶ್, ರಾಜಕೀಯ ಕಣದಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. 45 ವರ್ಷದ ಸಿನಿ ಪಯಣದ ಈ ಮಧುರ ನೆನಪುಗಳು, ಅವರ ಸಾಧನೆ, ಪರಿಶ್ರಮ ಮತ್ತು ಕಲೆಯ ಮೇಲಿನ ಪ್ರೀತಿಯ ನಿಜವಾದ ಸಾಕ್ಷಿ.

