Wednesday, January 14, 2026
Wednesday, January 14, 2026
spot_img

Delhi Blast | ಅಲ್–ಫಲಾಹ್ ವಿಶ್ವವಿದ್ಯಾಲಯದ ಮೇಲೆ ಇಡಿ ದಾಳಿ: ತನಿಖೆ ಮತ್ತಷ್ಟು ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 10ರಂದು ಕೆಂಪು ಕೋಟೆಯಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ಮತ್ತು ಭಯೋತ್ಪಾದಕ ಸಂಪರ್ಕಗಳ ಶಂಕೆಯ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯ (ED) ದೆಹಲಿ ಮತ್ತು ಹರ್ಯಾಣದ ಫರಿದಾಬಾದ್‌ನಲ್ಲಿ ಅಲ್–ಫಲಾಹ್ ವಿಶ್ವವಿದ್ಯಾಲಯ ಹಾಗೂ ಸಂಬಂಧಿತ ವ್ಯಕ್ತಿಗಳ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಮುಂಜಾನೆ ಶೋಧ ಆರಂಭಿಸಿದೆ.

ಬೆಳಿಗ್ಗೆ 5 ಗಂಟೆಗೆ ಆರಂಭವಾದ ಈ ದಾಳಿಯಲ್ಲಿ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ, ಟ್ರಸ್ಟಿಗಳ ಕಚೇರಿಗಳು ಹಾಗೂ ಅಧ್ಯಕ್ಷ ಜಾವೇದ್ ಅಹ್ಮದ್ ಸಿದ್ದಿಕಿ ಅವರ ನಿವಾಸವೂ ಒಳಗೊಂಡಿವೆ.

ಇಡಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದು, ‘ವೈಟ್ ಕಾಲರ್’ ಫರಿದಾಬಾದ್ ಭಯೋತ್ಪಾದಕ ಘಟಕಕ್ಕೆ ಸಂಬಂಧಿಸಿದ ಹಣಕಾಸಿನ ಚಟುವಟಿಕೆಗಳನ್ನು ಪರಿಶೀಲಿಸುತ್ತಿದೆ. ಆರೋಪಿಗಳು ಕೆಲಸ ಮಾಡಿದ್ದ ಸಂಸ್ಥೆಗಳು ಹಾಗೂ ಅದರ ಹಿನ್ನೆಲೆಯ ಬಗ್ಗೆ ಇಡಿ ತಂಡ ಪುರಾವೆ ಸಂಗ್ರಹಿಸುತ್ತಿದೆ.

ಈ ನಡುವೆ, ಭಯೋತ್ಪಾದಕ ಘಟಕಗಳೊಂದಿಗೆ ಅಲ್–ಫಲಾಹ್ ವಿವಿ ಹೊಂದಿದ ಎಂಬ ಶಂಕೆಗಳ ನಂತರ ಭಾರತೀಯ ವಿಶ್ವವಿದ್ಯಾಲಯಗಳ ಸಂಘ (AIU) ಇದರ ಸದಸ್ಯತ್ವವನ್ನು ಈಗಾಗಲೇ ರದ್ದುಗೊಳಿಸಿದೆ. ದೆಹಲಿ ಪೊಲೀಸರ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನೂ ಈ ವಿಶ್ವವಿದ್ಯಾಲಯದ ವಿರುದ್ಧ ದಾಖಲಿಸಲಾಗಿದ್ದು, ಒಂದರಲ್ಲಿ ವಂಚನೆ ಆರೋಪಗಳು ಮತ್ತು ಮತ್ತೊಂದರಲ್ಲಿ ನಕಲಿ ದಾಖಲೆಗಳ ಬಳಕೆ ಸಂಬಂಧಿತ ಆರೋಪಗಳು ಸೇರಿವೆ.

ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಇಡಿ ದಾಳಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.

Most Read

error: Content is protected !!