ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 10 ರಂದು ದೆಹಲಿಯಲ್ಲಿ ನಡೆದ ಆತ್ಮಾಹುತಿ ದಾಳಿಯ ಮುಖ್ಯ ಆರೋಪಿ, ಭಯೋತ್ಪಾದಕ ಮೊಹಮ್ಮದ್ ಉಮರ್ ನಬಿಯ ಹಳೆಯ ವಿಡಿಯೋವೊಂದು ಇದೀಗ ಬೆಳಕಿಗೆ ಬಂದಿದ್ದು, ಈ ವಿಡಿಯೋದಲ್ಲಿ ಆತ ತನ್ನ ಆತ್ಮಹತ್ಯಾ ಬಾಂಬ್ ದಾಳಿಯ ಕೃತ್ಯವನ್ನು ಇಂಗ್ಲಿಷ್‌ನಲ್ಲಿ ಸಮರ್ಥಿಸಿಕೊಂಡಿರುವುದು ಆಘಾತ ಮೂಡಿಸಿದೆ.
ಕ್ಯಾಮೆರಾ ಮುಂದೆ ಏಕಾಂಗಿಯಾಗಿ ಕುಳಿತು ಮಾತನಾಡಿದ ಉಮರ್ ನಬಿ, “ಆತ್ಮಹತ್ಯಾ ಬಾಂಬ್ ದಾಳಿಗಳ ಕಲ್ಪನೆಯನ್ನು ಜನರು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಇದೇ ಜನರು ಮಾಡುವ ದೊಡ್ಡ ತಪ್ಪು,” ಎಂದು ಹೇಳುವ ಮೂಲಕ ತನ್ನ ಭಾರತ ವಿರೋಧಿ ಮತ್ತು ಉಗ್ರವಾದಿ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾನೆ.
ವೈದ್ಯಕೀಯ ವಿದ್ಯಾರ್ಥಿಯಿಂದ ಉಗ್ರನ ಹಾದಿಗೆ
ಮೂಲತಃ ಪುಲ್ವಾಮಾ ಜಿಲ್ಲೆಯ ಕೊಯಿಲ್ ಗ್ರಾಮದವನಾದ ಮೊಹಮ್ಮದ್ ಉಮರ್, ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದ್ದ. ಆದರೆ, ಪೊಲೀಸ್ ಮೂಲಗಳ ಪ್ರಕಾರ, ಅವನಿಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೀವ್ರವಾದ ಆಸಕ್ತಿ ಇತ್ತು.
ಇತ್ತೀಚಿನ ತಿಂಗಳುಗಳಲ್ಲಿ ಉಮರ್‌ನ ನಡವಳಿಕೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿತ್ತು. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಆತ, ಅಕ್ಟೋಬರ್ 30 ರಿಂದ ಕೆಲಸಕ್ಕೆ ವಿದಾಯ ಹೇಳಿ ಫರಿದಾಬಾದ್ ಮತ್ತು ದೆಹಲಿ ನಡುವೆ ಪ್ರಯಾಣಿಸಲು ಪ್ರಾರಂಭಿಸಿದ್ದ. ಈ ಅವಧಿಯಲ್ಲಿ, ಆತ ಆಗಾಗ ರಾಮಲೀಲಾ ಮೈದಾನ ಮತ್ತು ಸುನ್ಹೇರಿ ಮಸೀದಿ ಬಳಿಯ ಮಸೀದಿ ಪ್ರದೇಶಗಳಲ್ಲಿ ಓಡಾಡುತ್ತಿರುವುದು ಕಂಡುಬಂದಿತ್ತು.
ನವೆಂಬರ್ 9 ರಂದು ಫರಿದಾಬಾದ್‌ನಲ್ಲಿ ನಡೆದ ದಾಳಿಯ ನಂತರ ಮೊಹಮ್ಮದ್ ಉಮರ್ ನಾಪತ್ತೆಯಾಗಿದ್ದ. ಈ ದಾಳಿ ಪ್ರಕರಣದ ತನಿಖೆ ವೇಳೆ ಗೋದಾಮೊಂದರಿಂದ ಸುಮಾರು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಆತನ ಕೆಲವು ಸಹಚರರನ್ನು ಬಂಧಿಸಲಾಯಿತು. ಮರುದಿನ, ನವೆಂಬರ್ 10 ರಂದು, ದೆಹಲಿಯಲ್ಲಿ ಉಗ್ರ ಉಮರ್ ಆತ್ಮಾಹುತಿ ದಾಳಿ ನಡೆಸಿದ್ದು, ಈ ದುರಂತ ಘಟನೆಯಲ್ಲಿ 15 ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆತನ ವಿಡಿಯೋ ಸಮರ್ಥನೆ ಮತ್ತು ಕೃತ್ಯವು ಉಗ್ರವಾದದ ಅಪಾಯಕಾರಿ ಆಳವನ್ನು ತೋರಿಸುತ್ತದೆ.

