Tuesday, November 18, 2025

CINE | ಪ್ರಶಾಂತ್ ನೀಲ್ ಗರಡಿಯಲ್ಲಿ ಹೊಸ ಪ್ರಯೋಗ: ‘ಡಾರ್ಕ್’ ಟೆಂಪ್ಲೇಟ್‌ನಿಂದ ಕಗ್ಗತ್ತಲಿಗೆ ಶಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಶಾಂತ್ ನೀಲ್ ಎಂದರೆ ತಕ್ಷಣ ನೆನಪಾಗುವುದು ಅವರ ಡಾರ್ಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳು. ಅವರ ಪ್ರತಿ ಫ್ರೇಮ್‌ನಲ್ಲೂ ತುಂಬಿರುವ ಕಪ್ಪು ಅಥವಾ ತಿಳಿ-ಕಪ್ಪು ಬಣ್ಣದ ಲೇಪನವೇ ಅವರ ಸ್ಟೈಲ್, ಅದೇ ಕಾರಣಕ್ಕೆ ಟ್ರೋಲ್ ಸಹ ಆಗುತ್ತಾರೆ. ಆದರೆ ಇದೀಗ, ‘ಕೆಜಿಎಫ್’ ಮತ್ತು ‘ಸಲಾರ್’ ಯಶಸ್ಸಿನ ಬಳಿಕ, ನೀಲ್ ತಮ್ಮ ‘ತಿಳಿ ಕಪ್ಪು’ ಶೈಲಿಯಿಂದ ಪೂರ್ಣ ‘ಕಗ್ಗತ್ತಲ’ ಜಗತ್ತಿನತ್ತ ಮುಖ ಮಾಡಿದ್ದಾರೆ!

ನೀಲ್ ಆಕ್ಷನ್ ನಿರ್ದೇಶಕರಾಗಿ ಯಶಸ್ಸು ಕಂಡಿದ್ದರೂ, ಈಗ ಅವರು ಹಾರರ್ ಸಿನಿಮಾದತ್ತ ಹೊರಳಿದ್ದಾರೆ. ಆದರೆ, ಅವರು ನಿರ್ದೇಶನ ಮಾಡುತ್ತಿಲ್ಲ; ಬದಲಿಗೆ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಹೊಸ ಹಾರರ್ ಸಿನಿಮಾವನ್ನು ‘ಪ್ರೆಸೆಂಟ್’ ಮಾಡುತ್ತಿದ್ದಾರೆ ಹಾಗೂ ಸಹ-ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ವಿಜ್ಞಾನ vs. ಮೂಢನಂಬಿಕೆ: ನೀಲ್ ಗರಡಿಯ ನಿರ್ದೇಶಕನ ಹೊಸ ಪ್ರಯತ್ನ

ನೀಲ್ ಅವರ ಮಾಜಿ ಶಿಷ್ಯ, ಕೀರ್ತನ್ ನಾಡಗೌಡ ಅವರು ಈ ಹಾರರ್ ಸಿನಿಮಾಗೆ ಆಕ್ಷನ್-ಕಟ್ ಹೇಳಲಿದ್ದಾರೆ. ಸೂರ್ಯರಾಜ್ ವೀರಭತಿನಿ, ಹನು ರೆಡ್ಡಿ ಮತ್ತು ಪ್ರೀತಿ ಪಗದಾಲ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ಕಥೆಯು ವಿಜ್ಞಾನ ಮತ್ತು ಮೂಢನಂಬಿಕೆಗಳ ಸುತ್ತ ಹೆಣೆಯಲಾಗಿದೆ. ನಿನ್ನೆಯಷ್ಟೇ ಮುಹೂರ್ತ ಕಂಡ ಈ ಸಿನಿಮಾವು ಯುವ ಪ್ರತಿಭೆಗಳನ್ನು ಬೆಂಬಲಿಸಲು ಮೈತ್ರಿ ಮೂವಿ ಮೇಕರ್ಸ್ ಮತ್ತು ಪ್ರಶಾಂತ್ ನೀಲ್ ಒಂದಾಗಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಉದ್ಯಮದ ದಿಗ್ಗಜರು ಶ್ಲಾಘಿಸಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಟಾಲಿವುಡ್‌ನಲ್ಲಿ ನೀಲ್ ಬ್ಯುಸಿ

ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್​ಟಿಆರ್ ನಟನೆಯ ಬಹುನಿರೀಕ್ಷಿತ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬಿಡುವಿಲ್ಲದಿದ್ದಾರೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿ. ಚಿತ್ರಕ್ಕಾಗಿ ಎನ್​ಟಿಆರ್ ಸಹ ತಮ್ಮ ದೇಹವನ್ನು ಸಪೂರಗೊಳಿಸಿಕೊಂಡಿದ್ದಾರೆ. ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

ಇದಾದ ನಂತರ, ನೀಲ್ ಪ್ರಭಾಸ್ ನಟನೆಯ ‘ಸಲಾರ್ 2’ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ. ಆ ಬಳಿಕ, ಮೆಗಾಸ್ಟಾರ್ ಅಲ್ಲು ಅರ್ಜುನ್ ಜೊತೆಗಿನ ಸಿನಿಮಾ ನಿರ್ದೇಶನ ಮಾಡುವ ಮಹತ್ವಕಾಂಕ್ಷೆಯ ಯೋಜನೆಯನ್ನು ಹೊಂದಿದ್ದಾರೆ.

error: Content is protected !!