ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಮತ್ತು ಸಮರ್ಥ ಕೆಲಸದ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
“ಪ್ರಯತ್ನದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ. ಯಾವುದೇ ವ್ಯಕ್ತಿ, ಸಮುದಾಯ ಅಥವಾ ದೇಶ ಕಠಿಣ ಪರಿಶ್ರಮವಿಲ್ಲದೆ ಪ್ರಗತಿ ಸಾಧಿಸಿಲ್ಲ,” ಎಂದು ಪ್ರತಿಪಾದಿಸಿದ ಮೂರ್ತಿಗಳು, ಯುವಜನರಿಗೆ ಪ್ರಥಮವಾಗಿ ‘ಜೀವನ ಗಳಿಸಿ, ನಂತರ ಕೆಲಸ-ಜೀವನ ಸಮತೋಲನ ಸಾಧಿಸಿ’ ಎಂಬ ಹೊಸ ಮಂತ್ರವನ್ನು ನೀಡಿದ್ದಾರೆ.
ಚೀನಾದ ‘996’ ಕೆಲಸದ ಸಂಸ್ಕೃತಿಯ ಉದಾಹರಣೆ
ತಮ್ಮ ಸಲಹೆಗೆ ಪೂರಕವಾಗಿ ಅವರು ಚೀನಾದ ಕೆಲಸದ ಸಂಸ್ಕೃತಿಯನ್ನು ಉಲ್ಲೇಖಿಸಿದರು. ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ್ದ ತಮ್ಮ ಹಿರಿಯ ಸಹೋದ್ಯೋಗಿಗಳು, ಅಲ್ಲಿ ‘9, 9, 6’ ಎಂಬ ಪರಿಪಾಠ ಇರುವುದನ್ನು ಗಮನಿಸಿರುವುದಾಗಿ ತಿಳಿಸಿದರು. “ಇದರರ್ಥ, ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ವಾರದಲ್ಲಿ 6 ದಿನಗಳು ಕೆಲಸ ಮಾಡುವುದು, ಅಂದರೆ ವಾರಕ್ಕೆ 72 ಗಂಟೆಗಳ ದುಡಿಮೆ,” ಎಂದು ಮೂರ್ತಿಗಳು ವಿವರಿಸಿದರು.
ಪ್ರಧಾನಿ ಮೋದಿ ‘100 ಗಂಟೆ’ ಕೆಲಸವೇ ಯುವಕರಿಗೆ ಆದರ್ಶ!
ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಯುವಜನತೆಗೆ ಆದರ್ಶ ವ್ಯಕ್ತಿಯಾಗಿ ಉಲ್ಲೇಖಿಸಿದ ನಾರಾಯಣಮೂರ್ತಿಗಳು, “ಪ್ರಧಾನಿ ಮೋದಿ ಅವರು ವಾರಕ್ಕೆ ಬಹುತೇಕ 100 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ,” ಎಂದು ಹೇಳುವ ಮೂಲಕ ತಮ್ಮ ವಾದಕ್ಕೆ ಮತ್ತಷ್ಟು ಬಲ ತುಂಬಿದರು.
ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ
ವಾರಕ್ಕೆ 70 ಗಂಟೆಗಳ ಕೆಲಸದ ಸಲಹೆಯು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಅವರ ವಾದವನ್ನು ಕೆಲವರು ಬೆಂಬಲಿಸಿದರೆ, ಮತ್ತೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
“ಯೂರೋಪ್ನಲ್ಲಿ ’10, 5, 5′ ಎಂಬ ಪರಿಕಲ್ಪನೆ ಇದೆ. ಅಂದರೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಾರಕ್ಕೆ 5 ದಿನಗಳು ಕೆಲಸ. ಅಲ್ಲಿ ಜನರು ವಾಕ್ ಹೋಗುತ್ತಾರೆ, ಟ್ರೆಕ್ಕಿಂಗ್ ಮಾಡುತ್ತಾರೆ, ಸ್ನೇಹಿತರನ್ನು ಭೇಟಿಯಾಗಿ ಜೀವನವನ್ನು ಅನುಭವಿಸುತ್ತಾರೆ. ನೀವು ಭಾರತವನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಿ, ನಮಗೆ ಬದುಕಲು ಅವಕಾಶ ಕೊಡಿ,” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ’70 ಗಂಟೆಗಳ’ ಸಲಹೆಗೆ ತೀವ್ರ ಟಾಂಗ್ ನೀಡಿದ್ದಾರೆ.

