ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ಯಶಸ್ವಿ ಸೀಸನ್‌ಗಳ ಕಾಲ UAEಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ನಂತರ, ಪ್ರತಿಷ್ಠಿತ ವರ್ಲ್ಡ್ ಟೆನಿಸ್ ಲೀಗ್ (WTL) ಇದೇ ಮೊದಲ ಬಾರಿಗೆ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಐಕಾನಿಕ್ ಸ್ಪೋರ್ಟ್ಸ್ ಅಂಡ್ ಈವೆಂಟ್ಸ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಈ ಭವ್ಯ ಟೂರ್ನಿಯು ಡಿಸೆಂಬರ್ 17 ರಿಂದ 20 ರವರೆಗೆ ನಾಲ್ಕು ದಿನಗಳ ಕಾಲ ಕರ್ನಾಟಕದ ಟೆನಿಸ್ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ (KSLTA) ಒಡೆತನದ ಸುಪ್ರಸಿದ್ಧ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂ ಐತಿಹಾಸಿಕ ಚೊಚ್ಚಲ ಆವೃತ್ತಿಗೆ ಆತಿಥ್ಯ ವಹಿಸಲಿದೆ.
ಸ್ಟಾರ್ ಆಟಗಾರರ ಸರಣಿ: ಟೆನಿಸ್ ಪ್ರಪಂಚವೇ ಬೆಂಗಳೂರಿಗೆ!
ಈ ಬಾರಿಯ WTL ಆವೃತ್ತಿಯು ವಿಶ್ವ ದರ್ಜೆಯ ಟೆನಿಸ್ ಪ್ರತಿಭೆಗಳ ತಾರಾಗಣವನ್ನು ಒಳಗೊಂಡಿದೆ. ಇದರಲ್ಲಿ ಡೇನಿಯಲ್ ಮೆಡ್ವೆಡೆವ್, ನಿಕ್ ಕಿರ್ಗಿಯೋಸ್, ವರ್ಲ್ಡ್ ನಂ. 5 ಎಲೆನಾ ರೈಬಾಕಿನಾ, ಪೌಲಾ ಬಡೋಸಾ, ಭಾರತದ ಹೆಮ್ಮೆಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರೋಹನ್ ಬೋಪಣ್ಣ, ಗೇಲ್ ಮಾನ್ಫಿಲ್ಸ್, ಆರ್ಥರ್ ಫಿಲ್ಸ್, ಮತ್ತು ಭಾರತದ ಟಾಪ್ ಆಟಗಾರ ಸುಮಿತ್ ನಾಗಲ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಅಂತರರಾಷ್ಟ್ರೀಯ ದೈತ್ಯರ ಜೊತೆಗೆ, WTL ದೇಶದ ಉದಯೋನ್ಮುಖ ಮತ್ತು ಅನುಭವಿ ಪ್ರತಿಭೆಗಳಾದ ಯೂಕಿ ಭಾಂಬ್ರಿ, ಅಂಕಿತಾ ರೈನಾ, ಶ್ರೀವಲ್ಲಿ ಭಾಮಿಡಿಪತಿ, ಮಾಯಾ ರೇವತಿ, ದಕ್ಷಿಣೇಶ್ವರ ಸುರೇಶ್ ಮತ್ತು ಶಿವಿಕಾ ಬರ್ಮನ್ ಅವರಿಗೂ ವೇದಿಕೆ ಕಲ್ಪಿಸಿದೆ.
ಚಾಂಪಿಯನ್‌ಗಳ ಸಂತಸದ ನುಡಿ
ಭಾರತದಲ್ಲಿ ಮೊದಲ ಬಾರಿ ಆಡುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದ ವರ್ಲ್ಡ್ ನಂ. 5 ಎಲೆನಾ ರೈಬಾಕಿನಾ, “ಭಾರತದ ಟೆನಿಸ್ ಸಂಸ್ಕೃತಿಯ ಬಗ್ಗೆ ಬಹಳಷ್ಟು ಕೇಳಿದ್ದೇನೆ. WTL ಮೂಲಕ ಇಲ್ಲಿ ನನ್ನ ಆಟದ ಪ್ರವೇಶವಾಗುತ್ತಿರುವುದು ನಿಜಕ್ಕೂ ರೋಮಾಂಚನಕಾರಿ. ಈ ಲೀಗ್‌ನ ವಿನೂತನ ಫಾರ್ಮ್ಯಾಟ್ ಬಹಳ ರೋಚಕವಾಗಿದ್ದು, ನನ್ನ ತಂಡದೊಂದಿಗೆ ಕೋರ್ಟ್‌ನಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಎದುರು ನೋಡುತ್ತಿದ್ದೇನೆ” ಎಂದರು.
ಮಹೇಶ್ ಭೂಪತಿ: ಟೆನಿಸ್ ಬಾಂಧವ್ಯವನ್ನು ಗಟ್ಟಿಗೊಳಿಸುವ ಅವಕಾಶ
WTL ನ ಸಹ-ಸಂಸ್ಥಾಪಕ ಮತ್ತು 12 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಮಹೇಶ್ ಭೂಪತಿ ಈ ಐತಿಹಾಸಿಕ ನಡೆ ಕುರಿತು ಮಾತನಾಡಿ, “ಭಾರತವು ಟೆನಿಸ್‌ನೊಂದಿಗೆ ಗಾಢವಾದ ಮತ್ತು ಶಾಶ್ವತ ಸಂಬಂಧವನ್ನು ಹೊಂದಿದೆ. WTL ಭಾರತಕ್ಕೆ ಬರುವುದು ಆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶ. ಅಂತರರಾಷ್ಟ್ರೀಯ ಚಾಂಪಿಯನ್‌ಗಳು ಮತ್ತು ಭಾರತದ ಶ್ರೇಷ್ಠ ಪ್ರತಿಭೆಗಳು ಒಂದೇ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದರಿಂದ, ನಾವು ಮುಂದಿನ ತಲೆಮಾರಿನ ಆಟಗಾರರನ್ನು ಪ್ರೇರೇಪಿಸಲು ಬಯಸುತ್ತೇವೆ,” ಎಂದು ತಿಳಿಸಿದರು.
ಐಕಾನಿಕ್ ಸ್ಪೋರ್ಟ್ಸ್ ಅಂಡ್ ಈವೆಂಟ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣನ್ ಕನನ್ ಅವರು, “ಭಾರತದ ಕ್ರೀಡಾ ಪರ್ಯಾಯವನ್ನು ಮತ್ತೊಂದು ಹಂತಕ್ಕೆ ಏರಿಸುವುದು ನಮ್ಮ ಗುರಿ. ವಿಶ್ವ ಮಟ್ಟದ ಟೂರ್ನಿಯನ್ನು ಆಯೋಜಿಸುವ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಜೊತೆಗೆ, ನಮ್ಮ ಆಟಗಾರರಿಗೆ ಅಂತರರಾಷ್ಟ್ರೀಯ ಆಟಗಾರರೊಂದಿಗೆ ಸ್ಪರ್ಧಿಸುವ ಮಹತ್ವದ ಅವಕಾಶವನ್ನು ನಾವು ಕಲ್ಪಿಸುತ್ತಿದ್ದೇವೆ. ಕ್ರೀಡೆ, ಸಂಸ್ಕೃತಿ, ಮನರಂಜನೆ ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ತರುವುದೇ ನಮ್ಮ ಆಶಯ” ಎಂದು ಹೇಳಿದರು.
ಈ ನಾಲ್ಕು ದಿನಗಳ ಟೂರ್ನಿ ಕ್ರೀಡಾಭಿಮಾನಿಗಳಿಗೆ ವಿಶ್ವ ದರ್ಜೆಯ ಟೆನಿಸ್ ಅನುಭವವನ್ನು ನೀಡಲು ಸಿದ್ಧವಾಗಿದೆ.

