ಹೊಸದಿಗಂತ ವರದಿ ಅಂಕೋಲಾ:
ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನವು ಸೆ.17 ಶನಿವಾರ ಬೆಳಿಗ್ಗೆ 7 ಗಂಟೆಯಿಂದ, ಮಧ್ಯಾಹ್ನ 11 ಗಂಟೆವರೆಗೆ ನಡೆಯಲಿದ್ದು, ಕಾರವಾರದಲ್ಲಿ ರಾಜ್ಯ ಪಾಲರಾದ ಥಾವರಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷದ ಶುಭ ಪರ್ವದಲ್ಲಿ ಪರಿಸರದ ವಿಷಯ ಮುಂಚೂಣಿಗೆ ಬಂದಿದೆ. ಭವಿಷ್ಯತ್ತಿನಲ್ಲಿ ಬಹು ಮುಖ್ಯವಾಗಿ ಸಮುದ್ರದ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ.
ಮೀನುಗಳ ಬದಲಿಗೆ ಪೊಲಿಥಿನ್ ಪ್ಲಾಸ್ಟಿಕಗಳೇ ಹೆಚ್ಚಾಗುವಂತ ಭಯ ವಿಜ್ಞಾನಿಗಳನ್ನು ಕಾಡಿದೆ. ಕಲುಷಿತ ಸಮುದ್ರ ನೀರಿನಿಂದ ಜಲಚರಗಳ ಸಂತತಿ ನಶಿಸುತ್ತಿದೆ. ಮೀನನ್ನು ಆಹಾರವಾಗಿ ಬಳಸುವ ವ್ಯಕ್ತಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಮಾತ್ರವಲ್ಲ ಮೀನುಗಾರಿಕೆಯನ್ನೇ ಉಪಜೀವನನ್ನಾಗಿಸಿಕೊಂಡಂತ ಲಕ್ಷಾಂತರ ಕುಟುಂಬಗಳಿಗೆ ಭವಿಷ್ಯದ ಕುರಿತು ದಿಗಿಲು ಹುಟ್ಟಿಸಿದೆ.
ಸಮುದ್ರಕ್ಕೆ ಅಪಾಯ: ಸಮುದ್ರದಿಂದ ಅಪಾಯ ಹತ್ತಿರ ಬಂದಿದೆ ಎಂಬ ಆತಂಕ ಪರಿಸರ ವಿಜ್ಞಾನಿಗಳದ್ದು. ಕಾರಣ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತವಾಗಿ ಅಂತರಾಷ್ಟ್ರೀಯ ಸಮುದ್ರದಂಡೆ ಸ್ವಚ್ಛತೆಯ ದಿನವಾದ ಸೆಪ್ಟೆಂಬರ್ 17 ರಂದು ದೇಶ ವ್ಯಾಪಿಯಾಗಿ “ಸ್ವಚ್ಛ ಮತ್ತು ಸುರಕ್ಷಿತ ಸಮುದ್ರ ತಟ “ಅಭಿಯಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸರಕಾರ ಮತ್ತು ಸಾಮಾಜಿಕ , ಸಂಸ್ಥೆಗಳು, ಸಂಘಟನೆಗಳು ,ಸೆಲೆಬ್ರಿಟಿಗಳು,ಮಠಾಧೀಶರು ಅಭಯಾನದಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಜಿಲ್ಲಾ ಸಂಯೋಜಕ ರಾಜೀವ ಗಾಂವಕರ್ ತಿಳಿಸಿದ್ದಾರೆ.
ಜನ ಸಹಭಾಗಿತ್ವಕ್ಕೆ ಕರೆ :
ಈ ಹಿನ್ನೆಲೆಯಲ್ಲಿ ಸ್ಥಳೀಯ ಜನತೆ ಟಾಗೋರ್ ಬೀಚ್ ಕಾರವಾರ, ನದಿಬಾಗ್ ಬೀಚ್ ಅಂಕೋಲ, ಗೋಕರ್ಣದ ಮುಖ್ಯ ಬೀಚ್
ಕುಡ್ಲೇ ಬೀಚ್, ಕಾಗಲ್ ಬೀಚ್ ಕುಮಟಾ ಇಕೋ ಬೀಚ್ ಹೊನ್ನಾವರ, ಮುರುಡೇಶ್ವರ ಬೀಚ್ ಸ್ವಚ್ಛತೆಗೆ ಕೈ ಜೋಡಿಸಬಹುದು.
ಇಕೋ ಮಿತ್ರಂ ಆ್ಯಪ್ ನಲ್ಲಿ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಪ್ಲೇಸ್ಟೋರ್ ನಿಂದ ಆಪ್ ಡೌನ್ಲೋಡ್ ಮಾಡಿಕೊಂಡು ನೋಂದಾಯಿಸುವಂತೆ ,ಜನ ಸಮುದಾಯದ ಆರೋಗ್ಯ, ಸುರಕ್ಷತೆ, ಸಾಮಾಜಿಕ ಕಳಕಳಿಯ ಈ ಅಗತ್ಯ ಕಾರ್ಯದಲ್ಲಿ ಕೈ ಜೋಡಿಸುವಂತೆ ರಾಜೀವ ಗಾಂವಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.