ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಬೆಂಗಳೂರು ಟೆಕ್ ಸಮಿಟ್ 2025 ‘ಫ್ಯೂಚರೈಸ್‌ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರು ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಿಸಿಎಂ ಶಿವಕುಮಾರ್, ದೇಶದ ಐಟಿ ರಫ್ತಿನಲ್ಲಿ 40% – 45% ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ನಮ್ಮಲ್ಲಿ ಹೆಚ್ಚು ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ. ನಮ್ಮ ಸರ್ಕಾರ ಅನ್ವೇಷಣೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ, ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಗಳೂರಿಗೆ ಆಗಮಿಸಿದ್ದೀರಿ. ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ನಾವು ನಿಮಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಫ್ಯೂಚರೈಸ್ ಎಂಬುದು ಕೇವಲ ಘೋಷವಾಕ್ಯವಲ್ಲ, ಇದು ಬದಲಾವಣೆ, ನಾಳಿನ ಭವಿಷ್ಯದ ಅಡಿಪಾಯ. ಇಂದು ನೀವು ನಮ್ಮ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಆಗಮಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ನಮ್ಮ ರಾಜ್ಯದ ಯಶಸ್ಸು ಅಡಗಿದೆ. ನಾನು ಇಂದು ನಿಮ್ಮ ಮುಂದೆ ಕೇವಲ ಉಪಮುಖ್ಯಮಂತ್ರಿಯಾಗಿ ನಿಂತಿಲ್ಲ, ಎಲ್ಲ ಬಂಡವಾಳ ಹೂಡಿಕೆ, ನಿಮ್ಮ ಆಲೋಚನೆಗಳ ಧ್ವನಿಯಾಗಿ ನಿಂತಿದ್ದೇನೆ. ಕರ್ನಾಟಕದ ಮೂಲಕ ಜಾಗತಿಕ ಭವಿಷ್ಯ ರೂಪಿಸಲು ನಾವಿಂದು ಇಲ್ಲಿ ಸೇರಿದ್ದೇವೆ ಎಂದರು.
ಬೆಂಗಳೂರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಇದು ಬೆಂಗಳೂರಿನ ಐಟಿ ಕ್ಷೇತ್ರದ ಸಾಮರ್ಥ್ಯ. ಬೆಂಗಳೂರಿನಲ್ಲಿ 1.40 ಲಕ್ಷ ಜನರಿದ್ದು, ಆ ಪೈಕಿ 20% ಜನರು ಐಟಿ ವೃತ್ತಿಪರರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿಎಸ್ಆರ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆ ನೀವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ. ಜೊತೆಗೆ ಬೆಂಗಳೂರಿನಿಂದಾಚೆಗೆ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ನೀತಿ ರೂಪಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ನೀವು ಬಲಿಷ್ಠವಾದರೆ, ನಾವು ಬಲಿಷ್ಠವಾಗುತ್ತೇವೆ. ನಿಮ್ಮ ಜೊತೆಗಿನ ಸಹಭಾಗಿತ್ವಕ್ಕೆ ನಾವು ಎದುರು ನೋಡುತ್ತೇವೆ. ನಾವೆಲ್ಲರೂ ಸೇರಿ ಉತ್ತಮ ಬೆಂಗಳೂರ, ಉತ್ತಮ ಕರ್ನಾಟ ಹಾಗೂ ಉತ್ತಮ ಭಾರತದ ನಿರ್ಮಾಣ ಮಾಡೋಣ. ಬೆಂಗಳೂರು ಜಾಗತಿಕ ನಗರ, ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಲು ಬಯಸುತ್ತೇವೆ. ಇದು ನಿಮ್ಮ ನಗರ, ಈ ನಗರವನ್ನು ಮತ್ತಷ್ಟು ಬಲವಾಗಿ ಬೆಳೆಸಲು ಸಹಕರಿಸಿ ಎಂದು ಕರೆ ನೀಡಿದರು.

