Tuesday, January 13, 2026
Tuesday, January 13, 2026
spot_img

ಸಿನಿಮಾ ಶೈಲಿಯ ಸ್ಕೆಚ್: RBI ಅಧಿಕಾರಿಗಳ ಸೋಗಿನಲ್ಲಿ ಬರೋಬ್ಬರಿ 7.11 ಕೋಟಿ ಕನ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನ ಮಧ್ಯಭಾಗದಲ್ಲೇ ಇಂದು ಮಧ್ಯಾಹ್ನ ಸವಾಲು ಹಾಕುವಂತಹ ಮಹಾದರೋಡೆ ನಡೆದಿದೆ. ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನವನ್ನು ತಡೆದು, ಬರೋಬ್ಬರಿ ₹7.11 ಕೋಟಿ ರೂಪಾಯಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ಪೊಲೀಸರಿಗೆ ತಲೆನೋವಾಗಿದೆ.

ಘಟನೆ ನಡೆದಿದ್ದು ಹೇಗೆ?

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ್ ಪಿಲ್ಲರ್ ಬಳಿಯಿಂದ ದರೋಡೆಯ ನಾಟಕ ಆರಂಭವಾಗಿದೆ. ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ತುಂಬಲು ಹೊರಟಿದ್ದ ಗುಜರಾತ್ ನೋಂದಣಿಯ (GJ 01 HT 9173) ಸಿಎಂಎಸ್ ಸಂಸ್ಥೆಯ ವಾಹನವನ್ನು ಬಿಳಿ ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ಆರೇಳು ಮಂದಿಯ ಗ್ಯಾಂಗ್ ಅಡ್ಡಗಟ್ಟಿದೆ.

ದರೋಡೆಕೋರರು ತಮ್ಮನ್ನು ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು’ ಎಂದು ಪರಿಚಯಿಸಿಕೊಂಡು ನಾಟಕವಾಡಿದ್ದಾರೆ. “ನೀವು ನಿಯಮ ಉಲ್ಲಂಘಿಸಿದ್ದೀರಿ, ತಕ್ಷಣ ಪೊಲೀಸ್ ಠಾಣೆಗೆ ಬನ್ನಿ” ಎಂದು ಬೆದರಿಸಿ, ಗನ್‌ಮ್ಯಾನ್‌ಗಳು ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಲ್ಲೇ ಇಳಿಸಿ, ವಾಹನ ಸಮೇತ ಚಾಲಕನನ್ನು ಹೈಜಾಕ್ ಮಾಡಿದ್ದಾರೆ.

ನಂತರ, ಅವರು ಜಯದೇವ ಡೇರಿ ಸರ್ಕಲ್ ಕಡೆಗೆ ವಾಹನವನ್ನು ಕರೆದೊಯ್ದಿದ್ದಾರೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ಸಿಎಂಎಸ್ ವಾಹನವನ್ನು ನಿಲ್ಲಿಸಿ, ಅದರಲ್ಲಿದ್ದ ₹7.11 ಕೋಟಿ ಹಣವನ್ನು ತಮ್ಮ ಇನ್ನೋವಾ ಕಾರಿಗೆ ಬದಲಾಯಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ತನಿಖೆ ಮತ್ತು ಭದ್ರತೆ ಬಲವರ್ಧನೆ

ಈ ಘಟನೆ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ನಗರ ಪೊಲೀಸ್ ಆಯುಕ್ತರು ತಕ್ಷಣವೇ ನಗರದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ಆರೋಪಿಗಳು ಬೆಂಗಳೂರು ಬಿಟ್ಟು ಹೋಗದಂತೆ ನಗರದ ಎಲ್ಲ ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಪ್ರತಿಯೊಂದು ವಾಹನವನ್ನು ತೀವ್ರವಾಗಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸುದ್ದಗುಂಟೆಪಾಳ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದರೋಡೆ ವೇಳೆ ಸಿಎಂಎಸ್ ವಾಹನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಸ್ಥಳಕ್ಕೆ ಫಿಂಗರ್ ಪ್ರಿಂಟ್ ತಂಡ ಮತ್ತು ಡಾಗ್ ಸ್ಕ್ವಾಡ್ ಆಗಮಿಸಿದ್ದು, ದರೋಡೆಕೋರರ ಪತ್ತೆಗೆ ಜಾಲ ಬೀಸಲಾಗಿದೆ. ದರೋಡೆಕೋರರ ಈ ‘ಆರ್‌ಬಿಐ ನಾಟಕ’ ಮತ್ತು ಸಿನಿಮೀಯ ಶೈಲಿಯ ಎಸ್ಕೇಪ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

Most Read

error: Content is protected !!