Saturday, November 22, 2025

ಅತ್ಯಾಚಾರ ಪ್ರಕರಣ: 70ರ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!

ಹೊಸದಿಗಂತ ವರದಿ ವೀರಾಜಪೇಟೆ:

ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಗೈದ 70ರ ವೃದ್ಧನಿಗೆ ವೀರಾಜಪೇಟೆ ನ್ಯಾಯಾಲಯವು 20 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 50ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಗೋಣಿಕೊಪ್ಪ ಮೈಸೂರಮ್ಮ ಕಾಲೋನಿ ನಿವಾಸಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಿ.ಟಿ ಅಪ್ಪುಕುಟ್ಟಿ (70) ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಘಟನೆಯ ಸಾರಾಂಶ: ಗೋಣಿಕೊಪ್ಪ ಮೈಸೂರಮ್ಮ ಕಾಲೋನಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡು ಕೂಲಿ ಜೀವನ ಸಾಗಿಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಈ ನಡುವೆ ಮೈಸೂರಮ್ಮ ಕಾಲೋನಿಯಲ್ಲಿ ಪುಟ್ಟ ಗೂಡಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಅಪ್ಪುಕುಟ್ಟಿ 2022ರ ಜ.16ರಂದು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ 8 ವರ್ಷದ ಬಾಲಕಿಯನ್ನು ಅಂಗಡಿ ಕರೆದು ಸಿಹಿ ಮತ್ತು ಬನ್ನು ನೀಡಿ ಪುಸಲಾಯಿಸಿದ್ದ.

ನಂತರ ಸನಿಹದಲ್ಲಿದ್ದ ತನ್ನ ಮನೆಯಲ್ಲಿ ಟಿ.ವಿ ತೋರಿಸುವ ಆಸೆ ಹುಟ್ಟಿಸಿದ ಆತ ಮನೆಗೆ ಕರೆದೊಯ್ದು ಬಾಲಕಿಯನ್ನು ವಿವಸ್ತೃಗೊಳಿಸಿ ಅತ್ಯಾಚಾರ ಮಾಡಿ ಕಳುಹಿಸಿದ್ದ. ಸಂಜೆಯ ವೇಳೆಗೆ ಮನೆಗೆ ಬಂದ ತಾಯಿಯು ಕೋಣೆಯಲ್ಲಿ ಕಣ್ಣೀರಿಡುತ್ತಾ ಕುಳಿತಿರುವ ಮಗಳನ್ನು ಕಂಡು ಕಾರಣ ಕೇಳಿದಾಗ, ಸಂತ್ರಸ್ತೆ ನಡೆದ ಘಟನೆಯನ್ನು ವಿವರಿಸುತ್ತಾಳೆ.

ಈ ಸಂಬಂಧ ಗೋಣಿಕೊಪ್ಪಲು ಠಾಣೆಯಲ್ಲಿ ಆರೋಪಿಯ ವಿರುದ್ಧ ಕಲಂ 376(2) (J) (N)376,AB ಐ.ಪಿಸಿ ಮತ್ತು ಕಲಂ 5 (L), (M)ರೆ/ವಿ 6(1) ಪೊಕ್ಸೊ ಕಾಯ್ದೆ ಮತ್ತು ಕಲಂ3 (2)(V) SC|ST (POA)ACT 1989ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಗಂಭೀರತೆಯನ್ನರಿತ ವೀರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾಗಿದ್ದ ಎಸ್.ನಿರಂಜನರಾಜೇ ಅರಸ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ನಟರಾಜು ಅವರು, ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಪಿ.ಟಿ. ಅಪ್ಪುಕುಟ್ಟನಿಗೆ, ಪೊಕ್ಸೊ ಕಾಯ್ದೆಯ ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಾದಾ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಿದ್ದು, ಸಂತ್ರಸ್ತ ಬಾಲಕಿಗೆ 2 ಲಕ್ಷ ರೂ.ಗಳನ್ನು ಸರ್ಕಾರದಿಂದ ಪರಿಹಾರ ರೂಪದಲ್ಲಿ ಕೊಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಯಾಸಿನಗ ಅಹಮದ್ ಅವರು ವಾದ ಮಂಡಿಸಿದ್ದರು.

error: Content is protected !!