Saturday, November 22, 2025

‘ನಮ್ಮ ಒತ್ತಡಕ್ಕೆ ಮಣಿದ ಕೇಂದ್ರ’: ಸಕ್ಕರೆ ಬೆಲೆ ಏರಿಕೆ ಸ್ವಾಗತಿಸಿದ ಸಿಎಂ-ಡಿಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ಸಕ್ಕರೆ ದರವನ್ನು ಹೆಚ್ಚಿಸುವ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಈ ಕುರಿತು ವಿಧಾನ ಸೌಧದಲ್ಲಿ ಪ್ರತಿಕ್ರಿಯಿಸಿದ ಉಭಯ ನಾಯಕರು, ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬೆಳವಣಿಗೆಯನ್ನು ಶ್ಲಾಘಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಹಲವು ವರ್ಷಗಳಿಂದ ಸಕ್ಕರೆ ಬೆಲೆಯಲ್ಲಿ ಯಾವುದೇ ಏರಿಕೆ ಆಗಿರಲಿಲ್ಲ. ಇದುವರೆಗೆ ಪ್ರತಿ ಕೆ.ಜಿ. ಸಕ್ಕರೆಗೆ 31 ದರವಿತ್ತು. ನಾವು ಈ ದರವನ್ನು 41 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಕೇಂದ್ರ ಸರ್ಕಾರವು ಈಗ ಅದನ್ನು 40 ರೂಪಾಯಿಗೆ ನಿಗದಿಪಡಿಸುವ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಇದರ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದೇವೆ” ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ:

ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಸಕ್ಕರೆ, ಮೊಲಾಸಸ್‌ ಸೇರಿದಂತೆ ಎಲ್ಲ ದರಗಳನ್ನು ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಪ್ರಹ್ಲಾದ್ ಜೋಶಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ರೈತರ ಸಮಸ್ಯೆಗಳ ಅರಿವಿದೆ. ಕಳೆದ ಹತ್ತು ವರ್ಷಗಳಿಂದ ದರ ಹೆಚ್ಚಳವಾಗದ ಕಾರಣ ಸಕ್ಕರೆ ಕಾರ್ಖಾನೆ ಮಾಲೀಕರು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ: ರೈತರಿಗೂ ಒಳ್ಳೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಅನುಕೂಲವಾಗಬೇಕು. ‘ರೈತರು ಇದ್ದರೆ ಫ್ಯಾಕ್ಟರಿ, ಫ್ಯಾಕ್ಟರಿ ಇದ್ದರೆ ರೈತರು’ ಎಂಬುದು ನಮ್ಮ ಸಿದ್ಧಾಂತ. ಉದ್ಯಮ ಕೂಡ ಸರಿಯಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ದರ ಹೆಚ್ಚಳಕ್ಕೆ ನಾವು ಕೇಂದ್ರದ ಮೇಲೆ ಒತ್ತಡ ಹೇರಿದ್ದೇವೆ” ಎಂದು ತಿಳಿಸಿದರು.

error: Content is protected !!