Saturday, November 22, 2025

ಮದುವೆ ಮನೆಯಲ್ಲೇ ಜೂಜಿನ ಅಡ್ಡೆ: 4 ಲಕ್ಷ ಜಪ್ತಿ, 8 ಜನರ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಮೊಗರಗಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಸಮಾರಂಭದ ನೆಪದಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ಭಾರೀ ಮೊತ್ತದ ಹಣವನ್ನು ವಶಪಡಿಸಿಕೊಂಡು, ಎಂಟು ಮಂದಿಯನ್ನು ಬಂಧಿಸಿದ್ದಾರೆ.

ವಿವಾಹ ಸಮಾರಂಭವೊಂದಕ್ಕೆಂದು ಬಂದಿದ್ದ ಕೆಲ ಅತಿಥಿಗಳು ಹೆಚ್ಚಿನ ಪ್ರಮಾಣದ ಹಣವನ್ನು ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿದ್ದರು. ಈ ಅಕ್ರಮ ಚಟುವಟಿಕೆಯ ಕುರಿತು ಖಚಿತ ಮಾಹಿತಿ ಪಡೆದ ವಿರಾಜಪೇಟೆ ಪೊಲೀಸರು, ತಕ್ಷಣವೇ ಕಲ್ಯಾಣ ಮಂಟಪದ ಜೂಜು ಅಡ್ಡೆಯ ಮೇಲೆ ದಿಢೀರ್ ದಾಳಿ ನಡೆಸಿದರು.

ಕಾರ್ಯಾಚರಣೆ ವೇಳೆ ಜೂಜಿಗೆ ಬಳಸುತ್ತಿದ್ದ ನಗದು 4,25,545 ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟದಲ್ಲಿ ತೊಡಗಿದ್ದ ಈ ಎಂಟು ಜನರ ವಿರುದ್ಧ ವಿರಾಜಪೇಟೆ ನಗರ ಠಾಣೆಯಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ವೀರಾಜಪೇಟೆ ಉಪ ವಿಭಾಗದ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಪಿ. ಚಂದ್ರಶೇಖರ್ ಅವರ ನಿರ್ದೇಶನ ಮತ್ತು ವೀರಾಜಪೇಟೆ ವೃತ್ತ ನೀರೀಕ್ಷಕ ಪಿ. ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ವೀರಾಜಪೇಟೆ ನಗರ ಠಾಣೆಯ ಪಿಎಸ್‌ಐ ಹೆಚ್.ಎಸ್. ಪ್ರಮೋದ್, ಅಪರಾಧ ವಿಭಾಗದ ಪಿಎಸ್‌ಐ ಟಿ.ಎಂ. ಕಾವೇರಪ್ಪ ಹಾಗೂ ಸಿಬ್ಬಂದಿ ವರ್ಗ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

error: Content is protected !!