Sunday, November 23, 2025

ಸಿಎಂ ಗೊಂದಲಕ್ಕೆ ತೆರೆ ಎಳೆಯಿರಿ: ಹೈಕಮಾಂಡ್‌ಗೆ ಸಚಿವ ಮುನಿಯಪ್ಪ ಡೆಡ್‌ಲೈನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಇರುವ ಗೊಂದಲಗಳಿಗೆ ಹೈಕಮಾಂಡ್ ಶೀಘ್ರವೇ ಸ್ಪಷ್ಟ ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತೀವ್ರವಾಗಿ ಆಗ್ರಹಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಯ್ಕೆ ಸಮಯದಲ್ಲಿ ಹೈಕಮಾಂಡ್ ನೀಡಿದ್ದ ಯಾವುದೇ ಭರವಸೆಯಿದ್ದರೂ ಅದನ್ನು ಬೇಗನೇ ಇತ್ಯರ್ಥಪಡಿಸಬೇಕು. ಈ ಎಲ್ಲಾ ಗೊಂದಲಗಳಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಅಂತಿಮ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

“ಪ್ರತಿದಿನ ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಬರಬಾರದು. ಸಿದ್ದರಾಮಯ್ಯ ಮತ್ತು ಡಿಸಿಎಂ ಇಬ್ಬರೂ ಕೂಡ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಆದರೆ, ಈ ವಿಚಾರದಲ್ಲಿ ಹೈಕಮಾಂಡ್ ತಕ್ಷಣ ಒಂದು ನಿರ್ಧಾರ ಕೈಗೊಳ್ಳಬೇಕು. ಇಂತಹ ಗೊಂದಲದ ವಾತಾವರಣವು ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟುಮಾಡುತ್ತದೆ” ಎಂದು ಮುನಿಯಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ದಲಿತ ಸಿಎಂ ವಿಚಾರದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಸ್ತಾಪ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. “ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲದಿಂದಲೂ ದಲಿತ ಸಿಎಂ ಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಖರ್ಗೆಯವರಿಗೆ ಸಿಎಂ ಆಗುವ ಅವಕಾಶ ತಪ್ಪಿತ್ತು. ನಮ್ಮದು ಕೇವಲ ಡಿಮ್ಯಾಂಡ್, ಆದರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ” ಎಂದು ಅವರು ಹೇಳಿದರು. ಅಲ್ಲದೆ, ಒಳಮೀಸಲಾತಿ ಜಾರಿಯಿಂದ ದಲಿತ ಸಮುದಾಯಗಳಿಗೆ ನ್ಯಾಯ ನೀಡಲಾಗಿದೆ ಎಂದೂ ಅವರು ತಿಳಿಸಿದರು.

ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಮುನಿಯಪ್ಪ, ತಮ್ಮನ್ನು ಬೇರೆ ಜಿಲ್ಲೆಯಿಂದ ಆಯ್ಕೆಯಾಗಿರುವ ರೂಪಾ ಅವರೊಂದಿಗೆ ಹೋಲಿಸಬೇಡಿ ಎಂದು ಹೇಳಿದರು. “ನಾನು ಕಾಂಗ್ರೆಸ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಹಿರಿಯ ನಾಯಕ. ನನ್ನ ಹಾಗೆಯೇ ಹಲವು ಹಿರಿಯರಿದ್ದಾರೆ. ಸಚಿವ ಸ್ಥಾನಗಳ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವ ಸಂಪುಟ ಪುನರ್‌ರಚನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಸಚಿವಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಿದ್ದಾರೆ. ಇಂದು ಶಾಸಕರಾದ ಬಿ.ಆರ್. ಪಾಟೀಲ್ ಮತ್ತು ಕೋನರೆಡ್ಡಿ ಅವರು ಖರ್ಗೆ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ನಿರ್ಧಾರದ ನಿರೀಕ್ಷೆಯಲ್ಲಿ ರಾಜ್ಯ ರಾಜಕೀಯ ಇದೆ.

error: Content is protected !!