Saturday, November 22, 2025

ಜಲ ಪುನರುಜ್ಜೀವನದಲ್ಲಿ ‘ಆರ್ಟ್ ಆಫ್ ಲಿವಿಂಗ್’ಗೆ ರಾಷ್ಟ್ರೀಯ ಮನ್ನಣೆ: 6ನೇ ರಾಷ್ಟ್ರೀಯ ಜಲ ಪ್ರಶಸ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಾನವತಾವಾದಿ ನಾಯಕ ಮತ್ತು ಆಧ್ಯಾತ್ಮಿಕ ಗುರುಗಳಾದ ರವಿಶಂಕರ ಗುರೂಜಿ ಅವರ ನೇತೃತ್ವದ ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯು, ರಾಷ್ಟ್ರಾದ್ಯಂತ ನಡೆಸಿದ ಬೃಹತ್ ಜಲ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಕ್ಕಾಗಿ ಪ್ರತಿಷ್ಠಿತ 6ನೇ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ಪಡೆದಿದೆ. ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯವು ಸಂಸ್ಥೆಯ ಈ ಮಹತ್ವದ ಕಾರ್ಯವನ್ನು ಗುರುತಿಸಿ, ಉತ್ತಮ ಸರ್ಕಾರೇತರ ಸಂಸ್ಥೆ ಮತ್ತು ಬೆಸ್ಟ್ ಸಿವಿಲ್ ಸೊಸೈಟಿ ವಿಭಾಗದಲ್ಲಿ ಮೂರನೆಯ ಸ್ಥಾನ ನೀಡಿ ಗೌರವಿಸಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ, ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಮತ್ತು ಜಲಶಕ್ತಿ ಮಂತ್ರಿಗಳಾದ ಸಿ. ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮಾಜ-ಸಹಯೋಗದ ಬೃಹತ್ ಪರಿಸರ ಆಂದೋಲನ:

ಆರ್ಟ್ ಆಫ್ ಲಿವಿಂಗ್‌ನ ಜಲ ಸಂರಕ್ಷಣಾ ಯೋಜನೆಯು ದೇಶದಲ್ಲೇ ಅತೀ ದೊಡ್ಡ ಸಮುದಾಯದ ಸಹಯೋಗದೊಂದಿಗೆ ನಡೆಸುತ್ತಿರುವ ಪರಿಸರ ಚಳುವಳಿಯಾಗಿ ರೂಪುಗೊಂಡಿದೆ. ರವಿಶಂಕರ ಗುರೂಜಿ ಅವರ ಸ್ಫೂರ್ತಿ ಮತ್ತು ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ಪರಿಸರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ:

ಜಲ ಸಂರಕ್ಷಣೆ: 1,05,000ಕ್ಕೂ ಹೆಚ್ಚು ಅಂತರ್ಜಲೀಕರಣ ಮತ್ತು ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಲಾಗಿದೆ. ಇದರಿಂದ 174 ಬಿಲಿಯನ್ ಲೀಟರ್ ನೀರನ್ನು ಉಳಿತಾಯ ಮಾಡಲಾಗಿದೆ.

ನದಿ ಪುನಶ್ಚೇತನ: ಸಂಸ್ಥೆಯು 75 ನದಿಗಳು, ಹೊಳೆಗಳು ಮತ್ತು ಉಪನದಿಗಳನ್ನು ಪುನಶ್ಚೇತನಗೊಳಿಸಲು ನೆರವಾಗಿದೆ.

ಹಸಿರು ಕ್ರಾಂತಿ: ಜಗತ್ತಿನಾದ್ಯಂತ 100 ದಶಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮಹತ್ತರ ಕಾರ್ಯ ಮಾಡಿದೆ.

ನೈಸರ್ಗಿಕ ಕೃಷಿ: 3 ದಶಲಕ್ಷ ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ತರಬೇತಿ ನೀಡಲಾಗಿದೆ. ಈ ಸುಸ್ಥಿರ ಪ್ರಯತ್ನದಿಂದಾಗಿ 5.5 ಲಕ್ಷ ಎಕರೆಗಿಂತಲೂ ಹೆಚ್ಚು ಭೂಪ್ರದೇಶವು ಎಲ್ಲಾ ಹವಮಾನಗಳನ್ನೂ ತಡೆದುಕೊಳ್ಳಬಲ್ಲಂತಹ ಕೃಷಿಭೂಮಿಯಾಗಿ ಪರಿವರ್ತನೆಯಾಗಿದೆ.

ಸಂಸ್ಥೆಯು ಕಲುಷಿತಗೊಂಡಿದ್ದ 152 ಜಲಮೂಲಗಳನ್ನು ಪುನಃಸ್ಥಾಪಿಸಿದೆ. ಅಲ್ಲದೆ, ನಮಾಮಿ ಗಂಗೆ ಯೋಜನೆಯ ಅಡಿಯಲ್ಲಿ 4500ಕ್ಕೂ ಅಧಿಕ ರೈತರಿಗೆ ತರಬೇತಿ ನೀಡಿ, 3,500 ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಕೃಷಿಗೆ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

6ನೇ ರಾಷ್ಟ್ರೀಯ ಜಲ ಪ್ರಶಸ್ತಿಗಾಗಿ ದೇಶದಾದ್ಯಂತ ಒಟ್ಟು 751 ಅರ್ಜಿಗಳು ಬಂದಿದ್ದವು. ತೀರ್ಪುಗಾರರ ಸಮಿತಿಯ ಮೌಲ್ಯಮಾಪನ ಮತ್ತು ಕೇಂದ್ರ ಜಲ ಆಯೋಗ ಹಾಗೂ ಕೇಂದ್ರೀಯ ಅಂತರ್ಜಲ ಮಂಡಳಿಯ ಸ್ಥಳ ಪರೀಕ್ಷೆಯ ನಂತರ, 10 ವಿಭಾಗಗಳಲ್ಲಿ ಒಟ್ಟು 46 ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಗೌರವಾನ್ವಿತ ಪಟ್ಟಿಯಲ್ಲಿ ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.

error: Content is protected !!