Saturday, November 22, 2025

AUS vs ENG | ಆ್ಯಶಸ್ ಕಾವು ಹೆಚ್ಚಿಸಿದ ಇಂಗ್ಲೆಂಡ್! ಪರ್ತ್ ಟೆಸ್ಟ್‌ಗೆ 12 ಸದಸ್ಯರ ಟೀಮ್ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿ ಆರಂಭಕ್ಕೆ ಇನ್ನೂ ಒಂದು ದಿನ ಮಾತ್ರ ಬಾಕಿಯಿರುವಾಗ, ಇಂಗ್ಲೆಂಡ್ ತಂಡ ಮೊದಲ ಟೆಸ್ಟ್‌ಗೆ ತನ್ನ 12 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಸರಣಿಗೆ ಮುನ್ನವೇ ತಂಡದ ರಚನೆಯನ್ನು ಬಹಿರಂಗಪಡಿಸಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಪರ್ತ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಪಂದ್ಯದಲ್ಲಿ ಯಾರು ಅಂತಿಮ 11ರಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಆಸಕ್ತಿ ತಾರಕ್ಕೇರಿದೆ.

ಇಂಗ್ಲೆಂಡ್ ತಂಡದಲ್ಲಿ ಆರಂಭಿಕರಾಗಿ ಬೆನ್ ಡಕೆಟ್ ಮತ್ತು ಝಾಕ್ ಕ್ರಾಲಿ ಮೈದಾನಕ್ಕಿಳಿಯಲಿದ್ದು, ಮೂರನೇ ಕ್ರಮಾಂಕದಲ್ಲಿ ಓಲಿ ಪೋಪ್‌, ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಅನುಭವೀ ಜೋ ರೂಟ್ ಬ್ಯಾಟ್ ಬೀಸಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ ಹಾಗೂ ಆರನೇ ಕ್ರಮಾಂಕದಲ್ಲಿ ನಾಯಕ ಬೆನ್ ಸ್ಟೋಕ್ಸ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಏಳನೇ ಕ್ರಮಾಂಕದಲ್ಲಿ ವಿಕೆಟ್‌ಕೀಪರ್ ಜೇಮಿ ಸ್ಮಿತ್ ತಮ್ಮ ಪಡೆಗೆ ಬೆಂಬಲ ನೀಡಲಿದ್ದಾರೆ.

ಆಲ್‌ರೌಂಡರ್ ಸ್ಥಾನಕ್ಕೆ ಬ್ರೈಡನ್ ಕಾರ್ಸ್‌ಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ವೇಗಿಗಳ ವಿಭಾಗದಲ್ಲಿ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. 11ನೇ ಸ್ಥಾನಕ್ಕಾಗಿ ಸ್ಪಿನ್ನರ್ ಶೊಯೆಬ್ ಬಶೀರ್ ಹಾಗೂ ವೇಗಿ ಗಸ್ ಅಟ್ಕಿನ್ಸನ್ ನಡುವೆ ಸ್ಪರ್ಧೆ ಇರುವುದರಿಂದ ಇದುವರೆಗೆ ಕುತೂಹಲ ಮುಂದುವರಿದಿದೆ.

ಪರ್ತ್ ಟೆಸ್ಟ್‌ಗೆ ಇಂಗ್ಲೆಂಡ್ ಆಯ್ಕೆ ಮಾಡಿದ 12 ಸದಸ್ಯರ ಪ್ರಾಥಮಿಕ ಬಳಗ:
ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್ (ವಿಕೆಟ್ ಕೀಪರ್), ಮಾರ್ಕ್ ವುಡ್.

ಪರ್ತ್ ಟೆಸ್ಟ್‌ನಿಂದ ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್, ಜೇಕಬ್ ಬೆಥೆಲ್ ಮತ್ತು ವಿಲ್ ಜ್ಯಾಕ್ಸ್ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಕಣಕ್ಕಿಳಿಯುವ ತಂಡವನ್ನು ಈಗಾಗಲೇ ಬಹಿರಂಗಪಡಿಸಿರುವುದರಿಂದ ಮೊದಲ ಟೆಸ್ಟ್‌ನ್ನೇ ಭರ್ಜರಿ ಪೈಪೋಟಿ ನೀಡಲಿದೆ ಎಂಬ ನಿರೀಕ್ಷೆ ಏರಿದೆ.

error: Content is protected !!