ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ 2026ರ ಅಂಡರ್–19 ಪುರುಷರ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಜಿಂಬಾಬ್ವೆ ಮತ್ತು ನಮೀಬಿಯಾ ಸಂಯುಕ್ತವಾಗಿ ಆತಿಥ್ಯ ವಹಿಸುತ್ತಿರುವ ಈ ಜೂನಿಯರ್ ವಿಶ್ವಮಟ್ಟದ ಕ್ರೀಡಾಸ್ಪರ್ಧೆ ಜನವರಿ 15ರಂದು ಆರಂಭವಾಗಿ ಫೆಬ್ರವರಿ 6ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಟೂರ್ನಿಗೆ ಹೊಸ ಚೈತನ್ಯ ತುಂಬುವಂತೆ ಜೊತೆಗೆ ಹಲವು ಹೊಸ ತಂಡಗಳ ಪ್ರವೇಶವೂ ಈ ಬಾರಿ ಗಮನ ಸೆಳೆದಿದೆ.
ಜ.15ರಂದು ನಡೆಯುವ ಭಾರತ–ಯುಎಸ್ಎ ಪಂದ್ಯವು ಟೂರ್ನಿಯ ಪ್ರಮುಖ ವೈಶಿಷ್ಟ್ಯವಾಗಿದ್ದು, ತಂಡದ ಹೊಸ ಪ್ರತಿಭೆಯನ್ನು ಕಂಡುಕೊಳ್ಳಲು ಇದು ಉತ್ತಮ ವೇದಿಕೆ ಎನ್ನಲಾಗಿದೆ. ಭಾರತ ಈ ಬಾರಿ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಜೊತೆ ಬಲಿಷ್ಠ ಪೈಪೋಟಿ ಎದುರಿಸುತ್ತಿದೆ. ಎಲ್ಲಾ ಲೀಗ್ ಪಂದ್ಯಗಳು ಬುಲವಾಯೊ ಮೈದಾನದಲ್ಲಿ ನಡೆಯಲಿವೆ.
ಟಾಂಜಾನಿಯಾ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್‌ಗೆ ಪ್ರವೇಶ ಪಡೆಯುವುದರಿಂದ ಈ ಟೂರ್ನಿ ಇನ್ನಷ್ಟು ವಿಶೇಷ. ಜಪಾನ್ ಕೂಡ ಮತ್ತೆ ಸ್ಪರ್ಧೆಗೆ ಮರಳುತ್ತಿದೆ. ಪಾಕಿಸ್ತಾನ ‘ಬಿ’ ಗುಂಪಿನಲ್ಲಿ ಇದ್ದರೂ, ಭಾರತ–ಪಾಕಿಸ್ತಾನ ನಡುವಿನ ಪೈಪೋಟಿ ಲೀಗ್ ಹಂತದಲ್ಲಿ ಇಲ್ಲ; ಆದರೆ ಸೂಪರ್ ಸಿಕ್ಸ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ, “U19 ವಿಶ್ವಕಪ್ ಭವಿಷ್ಯದ ಸೂಪರ್‌ಸ್ಟಾರ್‌ಗಳನ್ನು ಜಗತ್ತಿಗೆ ಪರಿಚಯಿಸಿದ ವೇದಿಕೆ. ಈ ಬಾರಿ ಕೂಡ ಹೊಸ ಪ್ರತಿಭೆಗಳು ಕ್ರಿಕೆಟ್‌ಗೆ ಹೊಸ ದಿಕ್ಕು ತೋರಲಿವೆ,” ಎಂದು ಹೇಳಿದ್ದಾರೆ.

