Friday, November 21, 2025

ಕೆಕೆಆರ್ vs ಡಿಸಿ vs ಸಿಎಸ್‌ಕೆ: 2026ರ ಐಪಿಎಲ್ ಹರಾಜಿನಲ್ಲಿ ‘ಬೇಬಿ ಮಲಿಂಗ’ನಿಗೆ ಬಿಗ್ ಫೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಬೇಬಿ ಮಲಿಂಗ’ ಎಂದೇ ಖ್ಯಾತರಾದ ಶ್ರೀಲಂಕಾದ ಯುವ ವೇಗಿ ಮತಿಶ ಪತಿರಾಣ ಅವರು ಐಪಿಎಲ್ ಸೀಸನ್ 2026ರ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ಸೀಸನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿದ್ದ ಪತಿರಾಣ ಅವರನ್ನು ಇದೇ ಮೊದಲ ಬಾರಿಗೆ ಫ್ರಾಂಚೈಸಿಯು ಅಚ್ಚರಿಕರವಾಗಿ ಬಿಡುಗಡೆ ಮಾಡಿದೆ.

ಪತಿರಾಣ ಅವರು ತಮ್ಮ ಮೂಲ ಬೆಲೆಯನ್ನು ಗರಿಷ್ಠ ಮೊತ್ತವಾದ 2 ಕೋಟಿ ರೂ. ಎಂದು ನಿಗದಿಪಡಿಸಿದ್ದಾರೆ. ಈಗಾಗಲೇ ಸ್ಟಾರ್ ಬೌಲರ್ ಆಗಿ ಗುರುತಿಸಿಕೊಂಡಿರುವ ಈ ಲಂಕಾ ವೇಗಿಗೆ ಹರಾಜಿನಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಸಿಎಸ್‌ಕೆ ಬಿಡುಗಡೆಯ ಹಿಂದಿನ ಲೆಕ್ಕಾಚಾರ

ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಮತಿಶ ಪತಿರಾಣ ಅವರನ್ನು ಬರೋಬ್ಬರಿ ₹13 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಈ ಬೃಹತ್ ಮೊತ್ತವೇ ಅವರನ್ನು ಬಿಡುಗಡೆ ಮಾಡಲು ಮುಖ್ಯ ಕಾರಣ ಎಂದು ಹೇಳಲಾಗಿದೆ. ಹೆಚ್ಚಿನ ಮೊತ್ತಕ್ಕೆ ರಿಟೈನ್ ಮಾಡಿಕೊಳ್ಳುವ ಬದಲು, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಅವರನ್ನು ಮರಳಿ ಖರೀದಿಸುವುದು ಸಿಎಸ್‌ಕೆ ಫ್ರಾಂಚೈಸಿಯ ತಂತ್ರಗಾರಿಕೆಯಾಗಿರುವ ಸಾಧ್ಯತೆ ಇದೆ. ಹೀಗಾಗಿ, ಪತಿರಾಣ ಅವರನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಿಎಸ್‌ಕೆ ಪ್ರಯತ್ನವನ್ನು ತಳ್ಳಿಹಾಕುವಂತಿಲ್ಲ.

ಕೆಕೆಆರ್ ಮತ್ತು ಡಿಸಿ ಕಣ್ಣು!

ಪತಿರಾಣ ಬಿಡುಗಡೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ, ಯುವ ವೇಗಿಯನ್ನು ಖರೀದಿಸಲು ಎರಡು ಪ್ರಮುಖ ಫ್ರಾಂಚೈಸಿಗಳು ತಯಾರಿ ನಡೆಸಿವೆ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಪತಿರಾಣ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ಲಾನ್ ರೂಪಿಸುತ್ತಿವೆ ಎಂದು ವರದಿಯಾಗಿದೆ.

ಕೆಕೆಆರ್ ಟಾರ್ಗೆಟ್: ಅದರಲ್ಲೂ, 64.30 ಕೋಟಿ ರೂ. ಬೃಹತ್ ಪರ್ಸ್ ಮೊತ್ತವನ್ನು ಹೊಂದಿರುವ ಕೆಕೆಆರ್, ವೇಗದ ಬೌಲರ್‌ನ ಅವಶ್ಯಕತೆಯನ್ನು ಪೂರೈಸಲು ಮತಿಶ ಪತಿರಾಣ ಅವರಿಗಾಗಿ ಭರ್ಜರಿ ಬಿಡ್ಡಿಂಗ್ ನಡೆಸುವುದಂತು ಖಚಿತ. ತಮ್ಮ ಸಾಮರ್ಥ್ಯವನ್ನು ಈಗಾಗಲೇ ಐಪಿಎಲ್‌ನಲ್ಲಿ ಸಾಬೀತುಪಡಿಸಿರುವ ಪತಿರಾಣ ಅವರಿಗಾಗಿ ಕೆಕೆಆರ್ ಹೆಚ್ಚಿನ ಮೊತ್ತ ತೆರೆದಿಟ್ಟರೂ ಅಚ್ಚರಿಯಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ‘ಬೇಬಿ ಮಲಿಂಗ’ನನ್ನು ತನ್ನ ತಂಡಕ್ಕೆ ಸೇರಿಸಿಕೊಂಡರೆ ಮುಂದಿನ ಸೀಸನ್‌ನಲ್ಲಿ ಅವರ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಹೀಗಾಗಿ, 2 ಕೋಟಿ ಮೂಲಬೆಲೆಯ ಮತಿಶ ಪತಿರಾಣ ಅವರನ್ನು ಹರಾಜಿನಲ್ಲಿ ಮರಳಿ ಖರೀದಿಸಲು ಸಿಎಸ್‌ಕೆ ಪ್ರಯತ್ನ ನಡೆಸಿದರೆ, ಕೆಕೆಆರ್ ಮತ್ತು ಡಿಸಿ ತಂಡಗಳಿಂದ ತೀವ್ರ ಪೈಪೋಟಿ ಎದುರಾಗುವುದು ಖಚಿತ.

error: Content is protected !!