ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ದಲ್ಲಿ ಹೆಚ್ಚುತ್ತಿರುವ ಹತ್ಯೆಗಳು ಮತ್ತು ಗಲಭೆ ಚಟುವಟಿಕೆಗಳನ್ನು ನಿಗ್ರಹಿಸಲು ಪೊಲೀಸ್ ಇಲಾಖೆ ಕೈಗೊಂಡ ತೀವ್ರ ಕಾರ್ಯಾಚರಣೆ ಗುರುವಾರ ತಡರಾತ್ರಿ ಭಾರೀ ಎನ್‌ಕೌಂಟರ್‌ಗೆ ಕಾರಣವಾಗಿದೆ.
ಲುಧಿಯಾನ ಸಮೀಪದ ದೆಹಲಿ–ಅಮೃತಸರ ರಾಷ್ಟ್ರೀಯ ಹೆದ್ದಾರಿಯ ಲಡೋವಾಲ್ ಟೋಲ್ ಪ್ಲಾಜಾ ಬಳಿ ಪೊಲೀಸರು ಭಯೋತ್ಪಾದಕರ ಕುರಿತು ಪಡೆದ ಗುಪ್ತ ಮಾಹಿತಿಯ ಆಧಾರದಲ್ಲಿ ಬಲೆ ಬೀಸಿದ್ದರು. ರಾತ್ರಿ ಕಾರಿನಲ್ಲಿ ಬಂದ ಶಂಕಿತರನ್ನು ತಡೆಯಲು ಯತ್ನಿಸಿದಾಗ ಅವರು ಪೊಲೀಸರ ಮೇಲೆಯೇ ಗುಂಡು ಹಾರಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ದಿಟ್ಟ ಕಾರ್ಯಾಚರಣೆ ನಡೆಸಿ ಪ್ರತಿ ಗುಂಡು ಹಾರಿಸಿದರು. ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಗುಂಡು ತಗುಲಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

