ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರೆಜಿಲ್‌ನ ಬೆಲೇಮ್‌ನಲ್ಲಿ ನಡೆಯುತ್ತಿದ್ದ ಸಂಯುಕ್ತ ರಾಷ್ಟ್ರಗಳ COP30 ಹವಾಮಾನ ಶೃಂಗಸಭೆಯ ಮುಖ್ಯ ವೇದಿಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ವೇಳೆ ಸಾವಿರಾರು ಮಂದಿಯನ್ನು ತುರ್ತುವಾಗಿ ಬೇರೆಡೆಗೆ ಸ್ತಾಳಾಂತರಿಸಲಾಯಿತು.
‘ಬ್ಲೂ ಝೋನ್’ಎಂದು ಕರೆಯಲ್ಪಡುವ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಲ್ಲಿ ಎಲ್ಲಾ ಸಭೆಗಳು, ಮಾತುಕತೆಗಳು, ದೇಶಗಳ ಪೆವಿಲಿಯನ್‌ಗಳು, ಮಾಧ್ಯಮ ಕೇಂದ್ರ ಮತ್ತು ಪ್ರಧಾನ ವೇದಿಕೆ ಸೇರಿ ಅತಿ ಮಹತ್ವದ ಗಣ್ಯರ ಕಚೇರಿಗಳಿವೆ.
ಬೆಂಕಿ ಕಾಣಿಸಿಕೊಂಡ ಸುದ್ದಿ ತಕ್ಷಣ ಹರಡುತ್ತಿದ್ದಂತೆ, ಭಾಗವಹಿಸಿದವರು ಎಲ್ಲ ಹೊರಬಾಗಿಲುಗಳ ಮೂಲಕ ಸುರಕ್ಷಿತವಾಗಿ ಹೊರಬಂದರು. COP30 ಆಯೋಜನಾ ಸಮಿತಿಯ ಪ್ರಕಾರ, ಗಾಯಗೊಂಡ 21 ಮಂದಿಗೂ ತಕ್ಷಣ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಹೊಗೆ ತುಂಬಿಕೊಂಡಿದ್ದರಿಂದ ಉಸಿರುಗಟ್ಟಿದ್ದು, ಅವರ ಸ್ಥಿತಿಯನ್ನು ವೈದ್ಯಕೀಯ ತಂಡವು ಮೇಲ್ವಿಚಾರಣೆಯಲ್ಲಿಟ್ಟಿದೆ.
ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಕೂಡ ಸ್ಥಳದಲ್ಲೇ ಇದ್ದು, ಯುಎನ್ ಭದ್ರತಾ ದಳದ ಸಹಾಯದಿಂದ ಅವರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಭಾರತದ ಪರಿಸರ ಸಚಿವ ಭೂಪೇಂದ್ರ ಯಾದವ್ ಹಾಗೂ ಭಾರತೀಯ ಪ್ರತಿನಿಧಿ ಮಂಡಳಿ ಕೂಡ ಬ್ಲೂ ವಲಯದಲ್ಲೇ ಇದ್ದರೂ, ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.

