ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನವೆಂಬರ್ 22ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ, ಭಾರತೀಯ ಟೆಸ್ಟ್ ನಾಯಕ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಗಿಲ್ ನವೆಂಬರ್ 19ರಂದು ತಂಡದೊಂದಿಗೆ ಗುವಾಹಟಿಗೆ ಬಂದಿದ್ದರೂ, ಮರುದಿನ ತರಬೇತಿಗೆ ಅವರು ವರದಿ ಮಾಡಲಿಲ್ಲ. ಬಳಿಕ ಅವರು ಮುಂಬೈಗೆ ತೆರಳಿದ್ದು, ಅಲ್ಲಿ ಎರಡು ಮೂರು ದಿನಗಳ ವಿಶ್ರಾಂತಿಯ ಬಳಿಕ ತಜ್ಞರ ಸಲಹೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆಗೆ ತಗುಲಿದ ಗಾಯದ ಕಾರಣ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕಿಳಿಯಲಿಲ್ಲ. ಈಗ ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಅವರ ಅಲಭ್ಯತೆಯನ್ನು ದೃಢಪಡಿಸಿದೆ. ಎರಡನೇ ಟೆಸ್ಟ್ ಮಾತ್ರವಲ್ಲ, ಮುಂದಿನ ಕೆಲ ದಿನಗಳಿಗೂ ಅವರು ತಂಡದ ಹೊರಗೆ ಇರಲಿದ್ದಾರೆ. ಇದರೊಂದಿಗೆ ಭಾರತ ತಂಡಕ್ಕೆ ಹೊಸ ನಾಯಕತ್ವ ಗುರುತಿಸುವ ಅಗತ್ಯವೂ ಉಂಟಾಗಿದೆ.
ಗಿಲ್ ಗೈರು ಅನಿವಾರ್ಯವಾಗಿರುವ ಹಿನ್ನೆಲೆ, ರಿಷಭ್ ಪಂತ್ ಗುವಾಹಟಿ ಟೆಸ್ಟ್‌ನಲ್ಲಿ ನಾಯಕತ್ವ ವಹಿಸಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಗಿಲ್ ನಿರ್ಗಮನದಿಂದಾಗಿ ಸಾಯಿ ಸುದರ್ಶನ್ ಅಥವಾ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಮಧ್ಯಕ್ರಮಕ್ಕೆ ಪರಿಗಣಿಸುವ ಸಾಧ್ಯತೆ ಇದೆ.

