Saturday, November 22, 2025

ಬಾಂಗ್ಲಾದೇಶದಲ್ಲಿ ಭೂಕಂಪಕ್ಕೆ 6 ಮಂದಿ ಸಾವು, ಕೊಲ್ಕತ್ತದಲ್ಲೂ ಕಂಪಿಸಿದ ಭೂಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಗ್ಗೆ 5.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬಾಂಗ್ಲಾದೇಶದ ನರಸಿಂಗ್ಡಿ ಬಳಿ ಇದರ ಕೇಂದ್ರ ಬಿಂದು ಪತ್ತೆಯಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10:08ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಢಾಕಾದಿಂದ ಆಗ್ನೇಯಕ್ಕೆ 10 ಕಿ.ಮೀ ದೂರದಲ್ಲಿ ಮತ್ತು ಭೂಮಿಯ 10 ಕಿ.ಮೀ ಆಳದಲ್ಲಿ ದಾಖಲಾಗಿದೆ. ಭೂಕಂಪದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಮೂವರು ಸಾವನ್ನಪ್ಪಿದ್ದು, ಇನ್ನೂ ಮೂವರು ಕಟ್ಟಡದ ರೇಲಿಂಗ್ ಬಿದ್ದು ಮೃತಪಟ್ಟಿದ್ದಾರೆ ಎಂದು ಡಿಬಿಸಿ ಟೆಲಿವಿಷನ್ ವರದಿ ಮಾಡಿದೆ.

ಕೇವಲ ಬಾಂಗ್ಲಾದಲ್ಲಿ ಮಾತ್ರವಲ್ಲದೇ ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯದ ಶಿಲ್ಲಾಂಗ್, ತ್ರಿಪುರಾ ಮತ್ತು ಮಿಜೋರಾಂನ ಐಜ್ವಾಲ್‌ನಲ್ಲೂ ಭೂಕಂಪದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ. ಕಂಪನದ ತೀವ್ರತೆಗೆ ಮನೆಯಲ್ಲಿನ ಫ್ಯಾನುಗಳು ಮತ್ತು ಗೋಡೆಗೆ ಹಾಕಿದ್ದ ವಸ್ತುಗಳು ಅಲುಗಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

error: Content is protected !!