ರಸ್ತೆ ತಡೆದು ಪಾಕ್ ಸಚಿವರ ಅಪಹರಣ: ಸಂಧಾನದ ಬಳಿಕ ಬಿಟ್ಟು ಕಳಿಸಿದ ಭಯೋತ್ಪಾದಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಸಚಿವ ಅಬೈದುಲ್ಲಾ ಬೇಗ್ ರಸ್ತೆ ಮಾರ್ಗವಾಗಿ ತೆರಳುವಾಗ ಅವರ ಕಾರನ್ನು ಅಡ್ಡಗಟ್ಟಿದ ಉಗ್ರರು ಸಚಿವರನ್ನು ಅಪಹರಣ ಮಾಡಿದ್ದರು. ಸರ್ಕಾರದೊಂದಿಗೆ ಮಾತುಕತೆ ನಡೆಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ ಉಗ್ರಗಾಮಿಗಳ ಹಿಡಿತದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ನಿಂದ ಬಾಬುಸರ್ ಕಡೆಗೆ ಬರುತ್ತಿದ್ದಾಗ ಅಪಹರಣ ನಡೆದಿದೆ. ಭಯೋತ್ಪಾದಕರ ಬಂಧನದಿಂದ ಬಿಡುಗಡೆಗೊಂಡ ಸಚಿವರು, ಜೈಲಿನಲ್ಲಿರುವ ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದಾರೆ.

ಭಯೋತ್ಪಾದಕರು ಸರ್ಕಾರಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದ್ದಲ್ಲದೆ, ಆ ಷರತ್ತುಗಳ ಅನುಷ್ಠಾನಕ್ಕೆ ಕೇವಲ 10 ದಿನಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ  ಭಯೋತ್ಪಾದಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರದೊಂದಿಗಿನ ಒಪ್ಪಂದದ ಮೇರೆಗೆ ಸಚಿವರನ್ನು ಬಿಡುಗಡೆಗೊಳಿಸಿದರು.

ಗಡುವು ಮೀರಿದರೆ ಸರ್ಕಾರದ ವಿರುದ್ಧ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ನಿಯಂತ್ರಣದಲ್ಲಿ ಕೆಲವು ಭಯೋತ್ಪಾದಕರು ಇದ್ದು, 2013ರಲ್ಲಿ ನಡೆದ ನಂಗ ಪರ್ಬತ್ ಘಟನೆಯ ಮುಂದುವರಿದ ಭಾಗ ಇದಾಗಿದೆ ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ಕೆಲವು ಭಯೋತ್ಪಾದಕರು ಪ್ಯಾರಾ ಮಿಲಿಟರಿ ಉಡುಪಿನಲ್ಲಿ ಬಂದು ವಿದೇಶಿ ಪ್ರವಾಸಿಗರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ನಂಗಾ ಪರ್ಬತ್ ಪ್ರದೇಶದಲ್ಲಿ ವಿದೇಶಿ ಪ್ರವಾಸಿಗರ ಹತ್ಯೆಯಲ್ಲಿ ಭಾಗಿಯಾಗಿರುವವರು ಹಾಗೂ ಡೈಮರ್‌ನಲ್ಲಿನ ಇತರ ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿರುವವರನ್ನು ಬಿಡುಗಡೆ ಮಾಡಬೇಕೆಂದು ಭಯೋತ್ಪಾದಕರು ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!