ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಟ್ರೇಲರ್ ಅನಾವರಣಗೊಂಡಿದ್ದು, ನಟ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.
ಬೋಯಪತಿ ಶ್ರೀನು ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದಲ್ಲಿ ಬಾಲಕೃಷ್ಣ ಮತ್ತೆ ದ್ವಿಪಾತ್ರದಲ್ಲಿ ಅಬ್ಬರಿಸಿದ್ದು, ಅವರ ಭಯಂಕರ ನೋಟ ಹಾಗೂ ಶಕ್ತಿ ತುಂಬಿದ ಡೈಲಾಗ್‌ಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿವೆ.
ಟ್ರೇಲರ್ ಮೊದಲ ಭಾಗದ ಯಶಸ್ಸಿನ ಮಟ್ಟಿಗಿಂತಲೂ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳು, ತೀವ್ರ ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ಬಾಲಯ್ಯನ ‘ಸರ್ಜಿಕಲ್ ಸ್ಟ್ರೈಕ್’ ಡೈಲಾಗ್ ಈಗಾಗಲೇ ವೈರಲ್ ಆಗಿದೆ. ಹರ್ಷಾಲಿ ಮಲ್ಹೋತ್ರಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದು, ಆದಿ ಪಿನಿಸೆಟ್ಟಿ ಮತ್ತು ಸಂಯುಕ್ತಾ ಮೆನನ್ ಸಹ ತಮ್ಮ ಪಾತ್ರಗಳಲ್ಲಿ ಮಿಂಚಲಿದ್ದಾರೆ.
14 ರೀಲ್ಸ್ ಪ್ಲಸ್ ಬ್ಯಾನರ್‌ನಲ್ಲಿ ರಾಮ್ ಅಚಂತ, ಗೋಪಿ ಅಚಂತ ಹಾಗೂ ಬಾಲಕೃಷ್ಣ ಅವರ ಪುತ್ರಿ ಎಂ. ತೇಜಸ್ವಿನಿ ನಿರ್ಮಿಸುತ್ತಿರುವ ‘ಅಖಂಡ 2 – ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಅಖಂಡ 2 ತಾಂಡವಂ’ ಎಂಬ ಟ್ಯಾಗ್‌ಲೈನ್‌ಗಳೊಂದಿಗೆ ಸಿನಿಮಾ ಭರ್ಜರಿಯಾಗಿ ಪ್ರಚಾರಗೊಳ್ಳುತ್ತಿದೆ. 2D ಜೊತೆಗೆ 3D ಯಲ್ಲೂ ಬಿಡುಗಡೆಯಾಗುವ ಈ ಚಿತ್ರ ಡಿಸೆಂಬರ್ 5ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಸಿನಿಮಾ ಮೇಲಿನ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿವೆ.

