ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಮೀಸಲಾತಿ ಸಂಬಂಧಿತ ಜನರ ಹಲವು ದಶಕಗಳ ಬೇಡಿಕೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ. ಕಾಂಗ್ರೆಸ್ ಪಕ್ಷ ಹಲವಾರು ದಶಕಗಳ ಕಾಲ ಅಧಿಕಾರದಲ್ಲಿತ್ತು. ಯಾಕೆ ಮೀಸಲಾತಿ ವಿಚಾರದಲ್ಲಿ ಇಂಥ ದಿಟ್ಟ ನಿರ್ಧಾರ ಮಾಡಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ವಾಗ್ದಾಳಿ ಮಾಡಿದರು.
ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಮೊದಲ ಬಾರಿಗೆ ಕೊಡಲಾಗಿದೆ. ರೈತ ಕೃಷಿ ಕೂಲಿಕಾರರು ಸೇರಿ ಅನೇಕ ಸಮುದಾಯಗಳಿಗೆ ಇದನ್ನು ವಿಸ್ತರಿಸಲಾಗಿದೆ. ಉದ್ಯೋಗ ಹೆಚ್ಚಳಕ್ಕೆ ನಾವು ಆದ್ಯತೆ ಕೊಡುತ್ತಿದ್ದೇವೆ. 5 ಲಕ್ಷ ಮಹಿಳೆಯರಿಗೆ, 5 ಲಕ್ಷ ಯುವಕರಿಗೆ ಕೆಲಸ ಸಿಗುವಂತೆ ಮಾಡುತ್ತಿದ್ದೇವೆ ಎಂದು ವಿವರಿಸಿದ ಅವರು, ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯವು ಕೇವಲ ಭಾಷಣದ ಸರಕಾಗಿತ್ತು ಹಾಗೂ ಮತಬ್ಯಾಂಕ್ ಮಾಡಲು ಇದನ್ನು ಬಳಸಲಾಗುತ್ತಿತ್ತು ಎಂದು ಆಕ್ಷೇಪಿಸಿದರು. ಕನಕದಾಸರ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರಕಾರ ಅನುದಾನ ಕೊಟ್ಟಿದೆ ಎಂದರು.
“ಸೋನಿಯಾ ಗಾಂಧಿ ಅವರಿಗೆ ಬಳ್ಳಾರಿ ಕ್ಷೇತ್ರವು ರಾಜಕೀಯವಾಗಿ ಮರುಜನ್ಮ ಕೊಟ್ಟಿತ್ತು. ಆಗ ಕಾಂಗ್ರೆಸ್ ಸರಕಾರವು ಈ ಭಾಗಕ್ಕೆ ಸಾವಿರಾರು ಕೋಟಿ ಅನುದಾನದ ಭರವಸೆ ಕೊಟ್ಟಿತ್ತು. ಆದರೆ, ಅದನ್ನು ಈಡೇರಿಸಲಿಲ್ಲ. ಈಗ ಮತ್ಯಾಕೆ ಬಂದಿದ್ದೀರಿ? ಏನು ಸುಳ್ಳು ಹೇಳಲು ಬಂದಿದ್ದೀರಿ?” ಎಂದು ಪ್ರಶ್ನಿಸಿದರು.
ಈ ಹಿಂದಿನ ಕಾಂಗ್ರೆಸ್ ಅಧಿಕಾರವಧಿಯನ್ನು ಟೀಕಿಸಿದ ಅವರು, “ಅನ್ನ ಭಾಗ್ಯದಲ್ಲಿ ಕನ್ನ ಭಾಗ್ಯ ಇತ್ತು. ಎಸ್‍ಸಿ, ಎಸ್‍ಟಿ ಜನಾಂಗದವರಿಗೆ ಬೋರ್‍ವೆಲ್ ವಿಚಾರದಲ್ಲೂ ಹಗರಣ ಮಾಡಿದ್ದೀರಿ. ಕಾಂಗ್ರೆಸ್ ತಪ್ಪು ಲೆಕ್ಕಾಚಾರ- ಭ್ರಷ್ಟಾಚಾರದಿಂದ ಕರ್ನಾಟಕದ ಅಭಿವೃದ್ಧಿಗೆ ಹಿನ್ನಡೆ ಆಗಿತ್ತು” ಎಂದು ಹೇಳಿದ್ದಾರೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.