ಹೊಸದಿಗಂತ ವರದಿ, ಮಡಿಕೇರಿ:
ಕೊಲಂಬಿಯಾ, ಇಥೋಪಿಯಾ ಮಾದರಿಯಲ್ಲಿಯೇ ಭಾರತದ ಗ್ರೀನ್ ಕಾಫಿಯನ್ನು ಭಾರತೀಯ ಕಾಫಿಯ ಮಾದರಿಯನ್ನಾಗಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಭಾರತೀಯ ಶುದ್ಧ ಕಾಫಿಗೆ ಜಾಗತಿಕ ಮಟ್ಟದಲ್ಲಿಯೂ ಮೌಲ್ಯವರ್ಧನೆಯೊಂದಿಗೆ ಬೇಡಿಕೆ ವೃದ್ದಿಯಾಗಲಿದೆ ಎಂದು ಉಪಾಸಿಯ ಅಧ್ಯಕ್ಷ ಜೆಫ್ರಿ ರೆಬೆಲ್ಲೋ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಕೊಡಗು ಕಾಫಿ ಬೆಳೆಗಾರರ ಸಂಘದ 143ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಕಾಫಿ ಈಗಾಗಲೇ ತನ್ನ ಸ್ವಾದದ ಮೂಲಕ ವಿಶ್ವಮಟ್ಟದಲ್ಲಿ ರಾಯಲ್ ಕಾಫಿ ಎಂದು ಮನ್ನಣೆ ಹೊಂದುವಂತಾಗಿದೆ ಎಂದರಲ್ಲದೆ, ಭಾರತೀಯ ಕಾಫಿ ಬೆಳೆಗಾರರೊಂದಿಗೆ ಉಪಾಸಿ ಸದಾ ಸಮನ್ವಯತೆ ಹೊಂದಿದೆ ಎಂದರು.
ಪರ್ಯಾಯ ಬೆಳೆ ಬಗ್ಗೆ ಚಿಂತನೆ: ಮುಂದಿನ ದಿನಗಳಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ಯೋಜನೆ ರೂಪಿಸಿ ಕಾಫಿ ತೋಟಗಳ ನಡುವೆ ಪರ್ಯಾಯವಾಗಿ ತೋಟಗಾರಿಕಾ ಬೆಳೆ ಬೆಳೆಸುವಿಕೆ, ಸಂಬಾರ ಮಂಡಳಿ ಜತೆ ಯೋಜನೆ ಹೊಂದಿ ವಿವಿಧ ಸಂಬಾರ ಪದಾರ್ಥಗಳನ್ನು ಬೆಳೆಸುವಿಕೆ, ಔಷಧೀಯ ಸಸ್ಯಗಳನ್ನು ಬೆಳೆಸುವಿಕೆಗೆ ಯೋಜನೆ ರೂಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಉಪಾಸಿಗೆ ಸೇರಿದ ಜಾಗದಲ್ಲಿಯೇ ಇವುಗಳನ್ನು ಬೆಳೆದು ನಂತರದ ಹಂತದಲ್ಲಿ ಆಸಕ್ತ ಬೆಳೆಗಾರರ ತೋಟಗಳಲ್ಲಿಯೂ ಪರ್ಯಾಯ ಬೆಳೆ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದೂ ಜೆಫ್ರಿ ರೆಬೆಲ್ಲೋ ಮಾಹಿತಿ ನೀಡಿದರು.
ಆಧುನಿಕ ತಂತ್ರಜ್ಞಾನವನ್ನು ಕೖಷಿಗೆ ಬಳಸಿಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದ್ದು ತೋಟ ನಿರ್ವಹಣೆಗೆ ಕ್ರಾಂತಿಕಾರಿ ಮಾದರಿಯನ್ನು ಬಳಸಿಕೊಳ್ಳಬೇಕಾಗಿದೆ ಎಂದೂ ಜೆಫ್ರಿ ರೆಬೆಲ್ಲೋ ಹೇಳಿದರು.
ಕೊಡಗು ವೖತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಿರಂಜನ ಮೂರ್ತಿ ಮಾತನಾಡಿ, ಕಾಡಿನಲ್ಲಿ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಬಿದಿರು ಮೆಳೆ ಪ್ರಮಾಣ ಕಡಮೆಯಾಗಿರುವುದು ಕೂಡ ಕಾಡಾನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣವಾಗಿದೆ. ಇದನ್ನು ನಿವಾರಿಸಲು ಕೊಡಗು ಜಿಲ್ಲೆಯಲ್ಲಿ 15 ಸಾವಿರ ಮೆಟ್ರಿಕ್ ಟನ್’ಗಳಷ್ಟು ಬಿದಿರು ಸಸಿ ನೆಡಲಾಗಿದೆ. 1 ಸಾವಿರದಷ್ಟು ಕೊಳಗಳು ಕಾಡಿನೊಳಗಿದ್ದು ಇವುಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ ಎಂದರು.
1300 ಆನೆಗಳು: ಕೊಡಗು ಜಿಲ್ಲೆಯಲ್ಲಿರುವ 1300 ಕಾಡಾನೆಗಳ ಪೈಕಿ 200 ರಷ್ಟು ಆನೆಗಳು ನಾಡಿಗೆ ಹೆಜ್ಜೆಯಿಕ್ಕುತ್ತಾ ಸಮಸ್ಯೆ ಸೖಷ್ಟಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಹುಲಿ ದಾಳಿಯನ್ನು ತಪ್ಪಿಸಲು ಈಗಾಗಲೇ 3 ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿಸಿದ ನಿರಂಜನ್, ಈ ವರ್ಷ 3 ಕಾಡಾನೆಗಳು ತೋಟಗಳ ನಡುವೆ ತಳಮಟ್ಟದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕೂಡಾ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ ವನ್ಯಜೀವಿಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ಅತ್ಯಂತ ವೇಗವಾಗಿ ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸುತ್ತಿದೆ ಎಂದೂ ಅವರು ಹೇಳಿದರು.
ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಮೋಹನ್ ದಾಸ್, ಕೊಡಗಿನಲ್ಲಿ ಕೖಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸರ್ಪಾಸಿ ಕಾನೂನಿನಿಂದಾಗಿ ಬ್ಯಾಂಕ್’ಗಳು ಬೆಳೆಗಾರರಿಗೆ ಆರ್ಥಿಕ ಹೊಡೆತ ನೀಡುತ್ತಿವೆ. ಕಾಫಿಯನ್ನು ಕೖಷಿ ಬೆಳೆ ಎಂದು ಪರಿಗಣಿಸಿ ತೆರಿಗೆಯಿಂದ ಹೊರತಾಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಲ್ಲಿ ಇತರ ಬೆಳೆಗಳನ್ನು ಪರಿಗಣಿಸಿರುವಂತೆಯೇ ಕಾಫಿಯನ್ನೂ ವಿಮೆಯಡಿ ತರಬೇಕೆಂದೂ ಬೆಳೆಗಾರರ ಸಂಘಟನೆಗಳು ಸರಕಾರಕ್ಕೆ ಒತ್ತಡ ಹೇರಿವೆ ಎಂದೂ ಮೋಹನ್ ದಾಸ್ ವಿವರಿಸಿದರು.
ಕೊಡಗು ಬೆಳೆಗಾರರ ಸಂಘದ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಉಪಾಧ್ಯಕ್ಷ ಸಿ.ಯು. ಅಶೋಕ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಗಳ ಕೊಡಗು ಬೆಳೆಗಾರರ ಸಂಘದ ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಹಾಜರಿದ್ದರು.