ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್-ಟೆಂಪೂ ಟ್ರಾವೆಲರ್ ಡಿಕ್ಕಿಯಾಗಿ ಸ್ಥಳದಲ್ಲೇ ಒಂಭತ್ತು ಜನ ಸಾವನ್ನಪ್ಪಿರುವ ದಾರುಣ ಘಟನೆ ಹಾಸನದ ಅರಸೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ತಡರಾತ್ರಿ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಮೃತರೆಲ್ಲರೂ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ಶ್ರೀ ಮಂಜುನಾಥ, ಹಾಸನಾಂಬೆಯ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಹಿಂದೆ ಟೆಂಪೊ ಟ್ರಾವೆಲರ್ ಬರುತ್ತಿತ್ತು. ಅದೇ ಮಾರ್ಗವಾಗಿ ಹಾಲಿನ ಟ್ಯಾಂಕರ್ ಬರುತ್ತಿದ್ದುದನ್ನು ಕಂಡ ಟೆಂಪೋ ಚಾಲಕ ವಾಹನವನ್ನು ಎಡಕ್ಕೆ ತೆಗೆದುಕೊಂಡು ಹೋಗಲು ಯತ್ನಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಹಾಲಿನ ಟ್ಯಾಂಕರ್ ಹಿಂದಿನಿಂದ ಟೆಂಪೋ ಟ್ರಾವೆಲರ್‌ಗೆ ಡಿಕ್ಕಿ ಹೊಡೆದಿದೆ. ಜಂಕ್ಷನ್‌ನಲ್ಲಿ ಏಕಮುಖ ಮಾರ್ಗದಲ್ಲಿ ಸೂಚನಾ ಫಲಕ ಇಲ್ಲದ ಕಾರಣ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಲೀಲಾವತಿ (50), ಚೈತ್ರ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60) ಮತ್ತು ಭಾರತಿ (50) ಎಂದು ಗುರುತಿಸಲಾಗಿದೆ. ಟೆಂಪೋ ವಾಹನದಲ್ಲಿದ್ದ ಹಲವರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಟ್ಯಾಂಕರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.