ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಡ್ಯ ತಾಲೂಕಿನ ಕುಂದನಿ ಬೆಟ್ಟದ ಮೇಲೆ 16 ಕಟ್ಟೆ ಕಟ್ಟಿ ಸಂರಕ್ಷಣೆ ಮಾಡಿ ಪರಿಸರಕ್ಕೆ ಅದ್ಭುತ ಕೊಡುಗೆ ನೀಡಿದ್ದ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಪರಿಸರ ಸಂರಕ್ಷಕ ಕಲ್ಮನೆ ಕಾಮೇಗೌಡ (72) ಸೋಮವಾರ ಬೆಳಗ್ಗೆ ವಿಧಿಶರಾದರು.
ಕುರುಬರಾಗಿದ್ದ ಕಲ್ಮನೆ ಕಾಮೇಗೌಡ ಅವರು, ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕೆರೆಗಳನ್ನು ನಿರ್ಮಿಸಿದ್ದರು. ಜೊತೆಗೆ ಕೆರೆಯ ಆಸುಪಾಸಿನಲ್ಲಿ ಹಾಗೂ ಬೆಟ್ಟದ ಸುತ್ತಲೂ ನೂರಾರು
ಮರಗಿಡಗಳನ್ನು ನೆಟ್ಟು ಬೆಳೆಸಿದ್ದರು. ಇವುಗಳ ನೀರು ನೀರು ಇಳಿಜಾರಿನಲ್ಲಿ ಹರಿಯುತ್ತದೆ, ಸುಡುವ ಬೇಸಿಗೆಯ ತಿಂಗಳುಗಳಲ್ಲಿಯೂ ಈ ಕೊಳಗಳು ಒಣಗದೆ ಜೀವವೈವಿದ್ಯವನ್ನು ಸಲಹುತ್ತಿವೆ. ಪಕ್ಷಿಗಳು ಮತ್ತು ಕಾಡು ಪ್ರಾಣಿಗಳಾದ ಕರಡಿ, ಚಿರತೆ, ಜಿಂಕೆ ಮತ್ತು ನರಿಗಳು ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಈ ಕೊಳಗಳನ್ನು ಆಶ್ರಯಿಸಿವೆ. ಕಾಮೇಗೌಡರ ಪ್ರಕೃತಿ ಪ್ರೇಮ ಪ್ರಧಾನಿ ನರೇಂದ್ರ ಮೋದಿಯವರು ಹಾಡಿ ಹೊಗಳಿದ್ದರು.
ಈ ವರ್ಷದ ಆರಂಭದಲ್ಲಿ ಮೋದಿ ಅವರು ತಮ್ಮ ಜನಪ್ರಿಯ ರೇಡಿಯೊ ಪ್ರಸಾರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕಾಮೇಗೌಡ ಅವರ ಕೆಲಸವನ್ನು ಶ್ಲಾಘಿಸಿದಾಗ ಅವರಿಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿತ್ತು. ಕಾಮೇಗೌಡರನ್ನು ʼಅಸಾಧಾರಣ ವ್ಯಕ್ತಿತ್ವʼ ಹೊಂದಿರುವ ʼಅಸಾಮಾನ್ಯ ರೈತʼ ಎಂದು ಮೋದಿಯವರು ಬಣ್ಣಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಅವರ ಕಾರ್ಯವನ್ನು ಶ್ಲಾಘಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಜೊತೆಗೆ ರಮಾಗೋವಿಂದ ಪ್ರಶಸ್ತಿ
ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಒಲಿದು ಬಂದಿದ್ದವು. ಕಾಮೇಗೌಡರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸುವಂತೆ ಸಾಮಾಜಿಕ ಸಂಘಟನೆಗಳು ಇದೀಗ ಮೋದಿಯವರನ್ನು ಒತ್ತಾಯಿಸುತ್ತಿವೆ. ಕಾಮೇಗೌಡ ಪತ್ನಿ,
ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ
ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ