ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾತ್ಯತೀತ ಜನತಾ ದಳ ಪಕ್ಷ ಸ್ಥಾಪನೆ ಆಗಿ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ರಜತ ಮಹೋತ್ಸವ ಆಚರಣೆ ಮಾಡಲಾಯಿತು. ಬೃಹತ್ ಸಮಾವೇಶ ಜೆಪಿ ಭವನದಲ್ಲಿ ನಡೆಯಿತು.
ರೈತ ಗೀತೆ ಗಾಯನ ಮೂಲಕ ಕಾರ್ಯಕ್ರಮಕ್ಕೆ ಆರಂಭಿಸಲಾಯಿತು. ಜೆಡಿಎಸ್ ಶಾಲು ತಿರುಗಿಸಿ ದೇವೇಗೌಡರು, ನಾಯಕರು, ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದರು.
ದೀಪ ಬೆಳಗಿ ಸಮಾವೇಶಕ್ಕೆ ದೇವೇಗೌಡ, ಕುಮಾರಸ್ವಾಮಿ ಮತ್ತು ಗಣ್ಯರು ಚಾಲನೆ ನೀಡಿದರು. ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಯಿತು. ಜೆಡಿಎಸ್ ಬಗ್ಗೆ ಮಾಹಿತಿ ಪಡೆಯುವ ವಾಟ್ಸಾಪ್ ಲೈನ್ 9964002028 ನಂಬರ್ ಬಿಡುಗಡೆ ಮಾಡಲಾಯಿತು. ದೇವೇಗೌಡರ ಜೀವನ, ಸಾಧನೆ ಮತ್ತು ಕುಮಾರಸ್ವಾಮಿ ಸಾಧನೆ, ಪಕ್ಷ ನಡೆದು ಬಂದ ಹಾದಿ ಬಗ್ಗೆ ವಿಡಿಯೋ ರಿಲೀಸ್ ಮಾಡಲಾಯಿತು.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧಿವೇಶನದಲ್ಲಿ ಆದ ನಿರ್ಣಯದ ಬಗ್ಗೆ ಸಮಾವೇಶದಲ್ಲಿ ಮಾಹಿತಿ ನೀಡಲಾಯಿತು. ರಾಜ್ಯದಲ್ಲಿ ಪ್ರವಾಹದಿಂದ ಆದ ಬೆಳೆಹಾನಿಗೆ ರಾಜ್ಯ ಸರ್ಕಾರ ಇನ್ನು ಪರಿಹಾರ ಕೊಟ್ಟಿಲ್ಲ. ಕೂಡಲೇ ಪರಿಹಾರ ಕೊಡಬೇಕು. ರೈತರಿಗೆ ಪರಿಹಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು. ದೇಶ್ಯಾದ್ಯಂತ ಪಕ್ಷ ಸಂಘಟನೆಯನ್ನ ಮತ್ತಷ್ಟು ಚುರುಕುಗೊಳಿಸುವ ನಿರ್ಣಯ ಅಂಗೀಕಾರ ಮಾಡಲಾಯಿತು. ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ ಪುನರ್ ಆಯ್ಕೆ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ ನಿರ್ಣಯವನ್ನೂ ಸಮಾವೇಶದಲ್ಲಿ ಅಂಗೀಕರಿಸಲಾಯಿತು.
ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಪಕ್ಷದ ನಾಯಕರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು.

