ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೊಸ ಕ್ರಾಂತಿಯ ಬಾಂಬ್ ಸಿಡಿಸಿದರು.
ಬೆಂಗಳೂರಿನಲ್ಲಿ ಶನಿವಾರದಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ರಾಜ್ಯದಲ್ಲಿ ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದಂತಹ ಬೆಳವಣಿಗೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದರು.
ರಾಜಕೀಯದಲ್ಲಿ ಯಾರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹೇಳಲಿಕ್ಕೆ ಆಗದಂತಹ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿ ಆಗಿದೆ. ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.
ಜನ ಕೆಟ್ಟ ಆಡಳಿತದಿಂದ ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆ ಸುಳಿಗೆಯಿಂದ ಬೇಸತ್ತು ಹೋಗಿದ್ದಾರೆ. ಮುಂದೆ ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಐದು ವರ್ಷದಲ್ಲಿ ಯಾವ ರೀತಿ ಆಡಳಿತ ಕೊಡಬೇಕು, ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ. ಒಂದು ವೇಳೆ ಜನ ಮೆಚ್ಚುವ ಸರ್ಕಾರ ನನ್ನಿಂದ ಕೊಡಲು ಆಗದಿದ್ದರೆ ಈ ಜನ್ಮದಲ್ಲಿ ಮತ್ತೆ ನನ್ನ ಮುಖ ತೋರಿಸಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯದ ಸಾಲ 7.50 ಲಕ್ಷ ಕೋಟಿ ದಾಟಿದೆ. ಸಿದ್ಧರಾಮಯ್ಯ ಒಬ್ಬರೇ 5ರಿಂದ 5.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಏನಕ್ಕೆ ಮಾಡಿದ್ರು ಇಷ್ಟು ಸಾಲವನ್ನು? ಯಾವ ಪುರುಷಾರ್ಥಕ್ಕೆ ಮಾಡಿದ್ರು ಎಂಬುದನ್ನು ಜನರಿಗೆ ಉತ್ತರ ಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.
ಜನರು ಹಾಗೂ ಕಾರ್ಯಕರ್ತರಿಂದ ಜೆಡಿಎಸ್ ಉಳಿದಿದೆ. ಜನತೆಗೆ ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಿದ್ದೇವೆ. ನಾವೇನು ಅನ್ಯಾಯ ಮಾಡಿದ್ದೇವೆ ಈ ರಾಜ್ಯಕ್ಕೆ? ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ? ನಮಗೆ ಯಾಕೆ ಪೂರ್ಣ ಪ್ರಮಾಣದ ಆಶೀರ್ವಾದ ಸಿಕ್ಕಿಲ್ಲ? ಯಾವ ಸಮುದಾಯಕ್ಕೂ ನಮ್ಮ ಪಕ್ಷದಿಂದ ಅನ್ಯಾಯ ಆಗಿಲ್ಲ. ಬೇರೆ ಬೇರೆ ರಾಜ್ಯಗಳ ಜನರು ದೇವೇಗೌಡರನ್ನು ನೆನಪು ಮಾಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಜನತೆಗೆ ಏಕೆ ಅಂತಹ ಭಾವನೆ ಇಲ್ಲ ಎಂದು ಸಚಿವರು ಅತೀವ ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ದರೋಡೆ ಮಾಡ್ತಿದೆ:
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇನ್ನು ಎಷ್ಟು ದರೋಡೆ ಮಾಡುತ್ತೀರಿ? ಎಷ್ಟೊಂದು ತೆರಿಗೆಗಳನ್ನು ಏರಿಸಿದಿರಿ? ಎಷ್ಟೊಂದು ಬೆಳೆಗಳನ್ನು ಹೆಚ್ಚಳ ಮಾಡಿದಿರಿ? ಬಿ ಖಾತಾ ಏ ಖಾತಾ ತೆರಿಗೆ ಎಂದು ದೋಖಾ ಮಾಡುತ್ತಿದೀರಿ. ಬೆಂಗಳೂರಿನಲ್ಲಿ, ರಾಜ್ಯದಲ್ಲಿ ರಸ್ತೆ ಗುಂಡಿಗೆ ಬಿದ್ದು ಎಷ್ಟೋ ಜನ ಸಾವನಪ್ಪಿದ್ದಾರೆ. ಕಬ್ಬು ಬೆಳೆಗಾರರ ಕಬ್ಬಿಗೆ ಬೆಂಕಿ ಹಾಕಿದ್ದು ಯಾರು ಅಂತಾ ಗೊತ್ತಿಲ್ಲಾ. ಈ ಪಾಪ ಸುಮ್ಮನೆ ಹೋಗಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಎರಡು ಬಾರಿ ಸಿಎಂ ಆಗಿದ್ದರೂ ಸಂಪೂರ್ಣ ಬಹುಮತದ ಸರ್ಕಾರ ಸಿಗಲಿಲ್ಲ. ಬಿಜೆಪಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದೆ. ೨೦ ತಿಂಗಳ ಅಧಿಕಾರವದಿಯಲ್ಲಿ ನೂರಾರು ಕಾಲೇಜು, ಆಸ್ಪತ್ರೆ ಕಟ್ಟಿದ್ದೇವೆ. ಲಾಟರಿ, ಸಾರಾಯಿ ನಿಷೇಧ ಮಾಡಿದಾಗ ಯಾವ ರೀತಿ ನನ್ನ ಮೇಲೆ ಎಷ್ಟೇ ಒತ್ತಡ ಹಾಕಿದರೂ ರಾಜ್ಯದ ಹೆಣ್ಣು ಮಕ್ಕಳಲ್ ಒಳ್ಳೆಯದಕಾಗಿ ನಾನು ಅವುಗಳನ್ನು ಬ್ಯಾನ್ ಮಾಡಿದೆ. ಆ ಕಾರಣಕ್ಕೆ ಜನರು ನನಗೆ ಶಿಕ್ಷೆ ವಿಧಿಸುತ್ತಿದ್ದಾರೆಯೇ? ಎಂದು ನೋವು ವ್ಯಕ್ತಪಡಿಸಿದರು ಕೇಂದ್ರ ಸಚಿವರು.

