ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಗುಂಟೂರು ಮೂಲದ ಮಹಿಳಾ ವೈದ್ಯೆ ಅಮೆರಿಕದ ವೀಸಾ ಸಿಗದೇ ಮನೋವೈಕಲ್ಯಕ್ಕೆ ಒಳಗಾಗಿ ಹೈದರಾಬಾದ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ.
38 ವರ್ಷದ ರೋಹಿಣಿ ಎಂದು ಗುರುತಿಸಲಾದ ವೈದ್ಯೆ ಮನೆಯ ಬಾಗಿಲು ಸಾಕಷ್ಟು ಹೊತ್ತು ತೆಗೆಯದೇ ಇದ್ದುದರಿಂದ ಮನೆಕೆಲಸದಾಕೆಗೆ ಅನುಮಾನ ಬಂದು, ಅವರು ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ನಂತರ ಕುಟುಂಬದವರು ಬಾಗಿಲು ಒಡೆದು ನೋಡಿದಾಗ ರೋಹಿಣಿ ಮೃತಪಟ್ಟಿರುವುದು ದೃಢಪಟ್ಟಿತು.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆಕೆ ಅತಿಯಾದ ನಿದ್ರೆ ಮಾತ್ರೆ ಸೇವಿಸಿ ಅಥವಾ ಯಾವುದೇ ಇಂಜೆಕ್ಷನ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಅಂತಿಮ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ವೇಳೆ ಪತ್ತೆಯಾದ ಡೆತ್ ನೋಟ್‌ನಲ್ಲಿ ರೋಹಿಣಿ ಅಮೆರಿಕದ ವೀಸಾ ತಿರಸ್ಕರಿಸಿದ್ದಕ್ಕಾಗಿಯೇ ತೀವ್ರ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಬರೆದಿರುವುದು ಕಂಡುಬಂದಿದೆ. ತಮ್ಮ ಮಗಳು ಅಮೆರಿಕದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಳು, ಆದರೆ ವೀಸಾ ನಿರಾಕರಣೆಯಿಂದಾಗಿ ಮನಸ್ಸಿಗೆ ದೊಡ್ಡ ಹಿನ್ನಡೆ ತಗುಲಿತ್ತು ಎಂದು ತಾಯಿ ಲಕ್ಷ್ಮಿ ಹೇಳಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

