Monday, November 24, 2025

ಜಿ20 ವೇದಿಕೆಯಲ್ಲಿ ‘ಮೆಲೋಡಿ’ ಮಾತುಕತೆ: ಇಟಲಿ-ಭಾರತ ಮಹತ್ವದ ಯೋಜನೆಗೆ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಮಹತ್ವದ ಮಾತುಕತೆ ನಡೆಸಿದ ನಂತರ, ಭಯೋತ್ಪಾದನೆಗೆ ಹಣಕಾಸು ಒದಗಿಸುವ ಜಾಲವನ್ನು ನಿಗ್ರಹಿಸಲು ಭಾರತ ಮತ್ತು ಇಟಲಿ ಜಂಟಿ ಉಪಕ್ರಮವನ್ನು ಘೋಷಿಸಿವೆ. ವ್ಯಾಪಾರ, ರಕ್ಷಣಾ, ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಿದರು.

ಇತ್ತೀಚಿನ ದೆಹಲಿ ಭಯೋತ್ಪಾದಕ ಘಟನೆಯ ಬಗ್ಗೆ ಇಟಲಿ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬಲ ನೀಡಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದೆ. ಈ ಹಿನ್ನೆಲೆಯಲ್ಲಿ, FATF ಮತ್ತು GCTF ವೇದಿಕೆಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಗುರಿಯೊಂದಿಗೆ ‘ಭಯೋತ್ಪಾದನೆ ಹಣಕಾಸು ನಿಗ್ರಹಕ್ಕೆ ಭಾರತ–ಇಟಲಿ ಜಂಟಿ ಉಪಕ್ರಮ’ವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸಭೆಯ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ, ಭಾರತ–ಇಟಲಿ ಕಾರ್ಯತಂತ್ರದ ಪಾಲುದಾರಿಕೆ ಎರಡು ರಾಷ್ಟ್ರಗಳ ಜನರಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ ಎಂದು ತಿಳಿಸಿದ್ದಾರೆ. ವ್ಯಾಪಾರ, ವಿಜ್ಞಾನ–ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪ್ರಗತಿಯನ್ನು ಇಬ್ಬರೂ ನಾಯಕರು ಮೆಚ್ಚಿದ್ದಾರೆ.

ಎರಡು ದೇಶಗಳ ನಡುವಿನ ವ್ಯಾಪಾರವು 2023–24ರಲ್ಲಿ ಸುಮಾರು 15 ಶತಕೋಟಿ ಅಮೆರಿಕನ್ ಡಾಲರ್ ಮಟ್ಟ ತಲುಪಿದೆ. 2000ರಿಂದ ಇಟಲಿಯಿಂದ ಭಾರತಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆಗಳು ಸುಮಾರು 4 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.

error: Content is protected !!